




ಕಡಬ ಟೈಮ್ಸ್ (KADABA TIMES): ಕಡಬ ತಾಲೂಕಿನ ಕಾಣಿಯೂರು ಬೆಳಂದೂರು ಗ್ರಾಮದ ಅಜಿರಂಗಳ ಎಂಬಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಸಾನಿಧ್ಯ ಇರುವ ಕುರುಹುಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಅಷ್ಠಮಂಗಲ ಪ್ರಶ್ನಾ ಚಿಂತನೆ ನಡೆಸುವ ಕುರಿತು ಸಮಾಲೋಚನಾ ಸಭೆಯು ಪ್ರಗತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಅ.31ರಂದು ನಡೆದಿದೆ.
ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇವಸ್ಥಾನದ ಕುರುಹು ಇರುವ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಲು ನಾವೆಲ್ಲಾ ಸೇರಿದ್ದೇವೆ. ಮುಂದಿನ ಎಲ್ಲಾ ಕಾರ್ಯಗಳು ಅಷ್ಠಮಂಗಲ ಪ್ರಶ್ನಾ ಚಿಂತನೆಯ ಮೂಲಕವೇ ನಡೆಯಬೇಕಾಗಿದ್ದು, ದೇವಸ್ಥಾನ ನಿರ್ಮಾಣಕ್ಕೆ ಬೇಕಾಗುವಷ್ಟು ಜಾಗವನ್ನು ಬಿಟ್ಟು ಕೊಡಲು ನಾನು ಬದ್ಧನಿದ್ದೇನೆ. ಸುಂದರ ದೇವಸ್ಥಾನವನ್ನು ನಿರ್ಮಿಸುವ ಸಂದರ್ಭದಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು.

ಬೆಳಂದೂರು, ಕಾಣಿಯೂರು, ಕಾಮಣ ಹಾಗೂ ಕೊಡಿಯಾಲ ಗ್ರಾಮಗಳ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಮಾತನಾಡಿ ಒಂದು ಊರಿನ ದೇವಸ್ಥಾನ ನಿರ್ಮಾಣವಾದರೆ ಅ ಊರೇ ಅಭಿವೃದ್ಧಿಗೊಂಡಂತೆ ಎಲ್ಲಾ ಜನತೆಯ ಸಹಕಾರದಿಂದ ದೇವಸ್ಥಾನವು ಅತೀ ಶೀಘ್ರದಲ್ಲಿ ನಿರ್ಮಾಣಗೊಳ್ಳಲಿ ಎಂದರು. ಪ್ರಶಾಂತ್ ಭಟ್ ಕಟ್ಟತ್ತಾರು ಮಾತನಾಡಿ, ನನ್ನ ಹಿರಿಯರಿಂದ ತಿಳಿದುಕೊಂಡ ಹಾಗೆ ಹಿಂದೆ ಇಲ್ಲಿ ಇದ್ದ ದೇವಸ್ಥಾನಕ್ಕೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಒಂದಕ್ಕೊಂದು ಸಂಬಂಧವಿದೆ. ಅಲ್ಲದೇ ಕಾಣಿಯೂರು ಜಾತ್ರೆ ನಡೆಯುವ ಸಂದರ್ಭದಲ್ಲಿ ಧ್ವಜರೋಹಣದ ಮೂಲಕ ನಡೆಯುತ್ತದೆ. ಇದನ್ನೆಲ್ಲಾ ಗಮನಿಸಿದಾಗ ನಮ್ಮ ಹಿರಿಯರ ಮಾತುಗಳು ನಿಜವಿರಬಹುದು. ಮುಂದೆ ಪ್ರಶ್ನಾ ಚಿಂತನೆಯಲ್ಲಿ ಎಲ್ಲಾವು ವಿಷಯಗಳು ಗೊತ್ತಾಗಲಿದೆ ಎಂದರು.ಸಭೆಯಲ್ಲಿ ಊರಿನ ಪ್ರಮುಖರು ಪಾಲ್ಗೊಂಡಿದ್ದರು.