




ಕಡಬ ಟೈಮ್ಸ್ (KADABA TIMES):ಪರಿಶಿಷ್ಟ ಕಾಲನಿ ರಸ್ತೆ ಅಭಿವೃದ್ದಿಗೆ ಬಿಡುಗಡೆಗೊಂಡ ಅನುದಾನವನ್ನು ಬೇರೆ ರಸ್ತೆಯೊಂದರ ಕಾಂಕ್ರೀಟಿಕರಣಕ್ಕೆ ಬಳಸಲು ಸಿದ್ದತೆ ನಡೆಸುತ್ತಿರುವ ಬಗ್ಗೆ ಆಕ್ರೋಶಗೊಂಡಿರುವ ದಲಿತ್ ಸೇವಾ ಸಮಿತಿ, ಇದೀಗ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.
ಪೆರಾಬೆ ಗ್ರಾ.ಪಂ. ವ್ಯಾಪ್ತಿಯ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತು ಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲನಿಗೆ ರಸ್ತೆ ಅಭಿವೃದ್ದಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶಾಸಕರ ಶಿಫಾರಸ್ಸಿನ ಮೇರೆಗೆ ಇದೇ ಕಾಲೋನಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಬಳಸಿದ್ದು ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಹಿಂದೆಯೂ ಈ ರಸ್ತೆಯ ಕಾಮಗಾರಿ ನಡೆಸಲು ಬಂದ ಗುತ್ತಿಗೆದಾರರ ಜೆಸಿಬಿಗೆ ತಡೆಯೊಡ್ಡಿದ ಘಟನೆಯೂ ನಡೆದಿತ್ತು. ಇದೀಗ ಕಾಮಗಾರಿ ಪ್ರಾರಂಭಿಸಿ ಜಲ್ಲಿ ಹಾಕಲಾಗಿದ್ದು ಈ ಹಿನ್ನಲೆಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಅಲ್ಲಿಯ ಕಾಲೋನಿಯ ನಿವಾಸಿಗಳು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಕೆಲ ತಿಂಗಳ ಬಳಿಕ ಸುಳ್ಯ ಶಾಸಕ. ಎಸ್. ಅಂಗಾರರವರು ಬಂದು ಕಾಲನಿ ರಸ್ತೆಯಲ್ಲಿ ಗುದ್ದಲಿ ಪೂಜೆ ನಡೆಸಿದ್ದರು. ಅಲ್ಲದೆ ಬಹುಕಾಲದ ಕಾಲೋನಿ ನಿವಾಸಿಗಳ ಬೇಡಿಕೆ ಈಡೇರಲಿದೆ ಎಂದು ಕಾಲೋನಿ ನಿವಾಸಿಗಳಲ್ಲಿ ವಿಶ್ವಾಸ ತುಂಬಿದ್ದರು. ಇದೀಗ ಶಾಸಕರ ಶಿಫಾರಸ್ಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆಗೊಂಡ 80 ಲಕ್ಷ ರೂ ಅನುದಾನದಲ್ಲಿ ಅತ್ರಿಜಾಲು-ಕಡಿರಡ್ಕ(ಪ.ಜಾ) ಮತ್ತು ಅಗತ್ತಾಡಿ-ಅತ್ರಿಜಾಲು (ಪ.ಪಂ) ಕಾಲನಿಗೆ ರಸ್ತೆಯನ್ನು ಅಭಿವೃದ್ದಿ ಮಾಡುವುದನ್ನು ಬಿಟ್ಟು ಕಜೆ ಎಂಬಲ್ಲಿಂದ ಕಾಮಗಾರಿ ಆರಂಭಿಸುವ ಯೋಜನೆ ರೂಪಿಸಿರುವುದು ಕಾಲೋನಿಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಹೋರಾಟ-ಸೇಸಪ್ಪ ಬೆದ್ರಕಾಡು: ಈ ಬಗ್ಗೆ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಪ.ಜಾ.ಪಂ. ಕಾಲೋನಿಗಳಿಗೆ ಮಂಜೂರಾದ ಅನುದಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಿ ಕಾಮಗಾರಿ ನಡೆಸುವ ಕ್ರಮ ಸರಿಯಲ್ಲ, ಮುಖ್ಯ ರಸ್ತೆ ದುರಸ್ತಿಯಾಗಬೇಕಿದ್ದರೆ ಅದಕ್ಕೆ ಬೇರೆಯೇ ಅನುದಾನ ತರಿಸಲಿ, ಅದು ಬಿಟ್ಟು ಸಮಾಜ ಕಲ್ಯಾಣ ಇಲಾಖೆಯಿಂದ ಕಾಲೋನಿ ರಸ್ತೆ ಅಭಿವೃದ್ದಿಗೆ ಬಿಡುಗಡೆಗೊಂಡ ಅನುದಾನವನ್ನು ಬೇರೆಡೆಗೆ ಬಳಸುವುದು ತಪ್ಪು, ಈ ಬಗ್ಗೆ ಉಗ್ರ ಹೋರಾಟ ಮಾಡಲಿದ್ದೆವೆ, ಯಾವುದೇ ಕಾರಣಕ್ಕೆ ಈ ಕಾಮಗಾರಿಯ ಬಿಲ್ ಮಂಜೂರು ಆಗಲು ಬಿಡುವುದಿಲ್ಲ ಎಂದು ಸೇಸಪ್ಪ ಬೆದ್ರಕಾಡು ಹೇಳಿದರು.
ಮುಖ್ಯ ರಸ್ತೆ ಅಭಿವೃದ್ದಿ ಮಾಡಿ ಮತ್ತೆ ಕಾಲೋನಿ ರಸ್ತೆ ಅಭಿವೃದ್ಧಿ-ಶಾಸಕ ಎಸ್. ಅಂಗಾರ: ಈ ಬಗ್ಗೆ ಕಡಬ ಟೈಮ್ಸ್ ಗೆ ಪ್ರತಿಕ್ರಿಯೆ ನೀಡಿದ ಸುಳ್ಯ ಶಾಸಕ ಅಂಗಾರ ಅವರು, ಕಾಲೋನಿಗೆ ಸಂಪರ್ಕಿಸುವ ಮುಖ್ಯ ರಸ್ತೆಯೇ ಸರಿ ಇಲ್ಲದಾಗ ಕಾಲೋನಿ ರಸ್ತೆ ಅಭಿವೃದ್ದಿ ಮಾಡಿ ಏನು ಪ್ರಯೋಜನ, ಅದಕ್ಕಾಗಿ ನಾವು ಈಗಾಗಲೇ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಮುಂದುವರಿಸಿ ಕಾಂಕ್ರೀಟಿಕರಣ ಮಾಡಿಕೊಂಡು ಆದಷ್ಟು ಕಾಲೋನಿ ರಸ್ತೆಯನ್ನು ಅಭಿವೃದ್ದಿ ಮಾಡುವ ಬಗ್ಗೆಯೇ ಕ್ರೀಯಾಯೋಜನೆ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ಕಾಲೋನಿ ರಸ್ತೆಯನ್ನು ಪೂರ್ತಿಯಾಗಿ ಅಭಿವೃದ್ದಿ ಮಾಡಲಾಗುವುದು, ನಾವು ಅನುದಾನವನ್ನು ಇಡುವಾಗ ಕಾಲೋನಿ ನಿವಾಸಿಗಳಲ್ಲಿ ಕೇಳಿ ಇಡುವುದಲ್ಲ, ಒಟ್ಟಾರೆ ಕ್ಷೇತ್ರದ ಅಭಿವೃದ್ದೀಗೆ ಸಂಬಂಧಪಟ್ಟು ಆಯಾ ಪ್ರದೇಶದ ಎಲ್ಲ ಜನರಿಗೆ ಪ್ರಯೋಜನವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಶಾಸಕರು ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿರುವಾಗ ವೃಥಾ ರಾಜಕೀಯ ಮಾಡಿ ಗೊಂದಲ ಸೃಷ್ಟಿಸಬಾರದು, ಇದರಿಂದ ಮುಂದಿನ ಅಭಿವೃದ್ದಿಗೆ ತೊಡಕಾಗುತ್ತದೆ ಎಂದು ಹೇಳಿದರು.