




ಕಡಬ: ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಕಡಬ ತಾಲೂಕು ಕೇಂದ್ರದಿಂದ ಮೂರು ಕಿ.ಮೀ ದೂರದಲ್ಲಿರುವ ಪ್ರಮುಖ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ದೊಂದಿ ಬೆಳಕಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ವಿತರಣೆ ಮತ್ತು ಫ್ಲಾಟ್ ಫಾರ್ಮ್ ನಲ್ಲಿ ದೊಂದಿ ಬೆಳಕು ಇಟ್ಟಿರುವುದು ವೈರಲ್ ಆಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದು ಸಾರ್ವಜನಿಕರು ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ಈ ಎಲ್ಲಾ ಬೆಳವಣಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ
ಆಗಿರುವ ಚರ್ಚೆ ರೈಲ್ವೇ ಅಧಿಕಾರಿಗಳಿಗೆ ಮುಟ್ಟಿದೆ. ಬೆಳಕಿನ ವ್ಯವಸ್ಥೆಗಾಗಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು
ಇದರ ಕೆಲಸ ಪ್ರಗತಿಯಲ್ಲಿದೆ.ಶೀಘ್ರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದು ರೈಲ್ವೇ ಇಲಾಖೆ ಎಕ್ಸ್
(X)ಮೂಲಕ ಉತ್ತರಿಸಿದೆ.
2023-24ರ ಸಾಲಿನಲ್ಲಿ ಪ್ಲಾಟ್‌ಫಾರ್ಮ್ ನಂ. 1ರಲ್ಲಿ 450 ಮೀಟರ್‌ಗಳ ಉನ್ನತ ಮಟ್ಟದ ಫ್ಲಾಟ್‌ಫಾರ್ಮ್ ಹಾಗೂ ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸುವ ಬಗ್ಗೆ ರೈಲ್ವೇ ಇಲಾಖೆ ಈ ಹಿಂದೆ ಮಾಹಿತಿ ನೀಡಿತ್ತು. ಅದರಂತೆ ಕಾಮಗಾರಿ ಆರಂಭವಾದರೂ ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿಲ್ಲ. ಮಂಗಳೂರು- ಹಾಸನ ರೈಲು ಮಾರ್ಗದಲ್ಲಿರುವ ಕೋಡಿಂಬಾಳದಲ್ಲಿ ಮಾತ್ರವಲ್ಲದೆ ಕಾಣಿಯೂರಿನಲ್ಲಿ ಪ್ಲಾಟ್ಫಾರ್ಮ್ ಸಂಖ್ಯೆ 1 ರಲ್ಲಿ 450 ಮೀಟರ್ ಉದ್ದದ ಫ್ಲಾಟ್‌ಫಾರ್ಮ್ ಮತ್ತು ಎಡಮಂಗಲ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್ಮ್ -1 ರಲ್ಲಿ 560 ಮೀಟರ್ ಉದ್ದದ ಉನ್ನತ ಮಟ್ಟದ ಪ್ಲಾಟ್ಫಾರ್ಮ್, ಆಸನ ವ್ಯವಸ್ಥೆಗಳು, ನೀರಿನ ವ್ಯವಸ್ಥೆ, 60 ಚದರ ಮೀಟರ್ ಪ್ಲಾಟ್ಫಾರ್ಮ್ ಶೆಲ್ಟರ್ ಮತ್ತು ಬೆಳಕಿನ ಸೌಲಭ್ಯ ಕಲ್ಪಿಸಲು ಮುಂದಾಗಿತ್ತು.
ಕಡಬ ತಾಲೂಕಿನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ದಿನನಿತ್ಯ ಮಂಗಳೂರು, ಬೆಂಗಳೂರು ಸೇರಿದಂತೆ ನೆರೆಯ ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ತೆರಳುವ ಅದೆಷ್ಟೋ ಜನರು ಕೋಡಿಂಬಾಳ ರೈಲು ನಿಲ್ದಾಣವನ್ನು ಆಶ್ರಯಿಸುತ್ತಿದ್ದಾರೆ. ಈಗಾಗಲೇ ನೂರಾರು ಜನ ಇದರ ಪ್ರಯೋಜನ
ಪಡೆಯುವವರಿದ್ದಾರೆ. ಇಲ್ಲಿಂದ
ಪವಿತ್ರ ಸ್ಥಳಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಪುಣ್ಯ ಪ್ರವಾಸಿ ತಾಣಗಳಿಗೆ ನೂರಾರು ಭಕ್ತರು ದೂರದೂರುಗಳಿಂದ ಬಂದು ಹೋಗುತ್ತಿದ್ದಾರೆ. ಹೀಗಿದ್ದರೂ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರಿಗೆ ಅನುಕೂಲಕರವಾದ ಸೌಲಭ್ಯಗಳು ಸಿಗುತ್ತಿಲ್ಲ.
1976-77ರಲ್ಲಿ ಮಂಗಳೂರು-ಹಾಸನ-ಬೆಂಗಳೂರು ರೈಲು ಹಳಿ ನಿರ್ಮಾಣವಾದ ಎರಡು ಮೂರು ವರ್ಷಗಳಲ್ಲೇ ಕೋಡಿಂಬಾಳದಲ್ಲಿ ರೈಲು ನಿಲ್ದಾಣ ನಿರ್ಮಾಣಗೊಂಡಿತ್ತು. ಸುಮಾರು ಎಂಟು ವರ್ಷಗಳ ಕಾಲ ಇಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ರಾತ್ರಿ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ಸ್ಟೇಷನ್‌ನಲ್ಲಿ ತಂಗುತ್ತಿದ್ದ ರೈಲು ಬೆಳಗ್ಗೆ 7.30 ಗಂಟೆಗೆ ಕೋಡಿಂಬಾಳ ಮೂಲಕ ಹೊರಟು, ಪುತ್ತೂರು, ಮಂಗಳೂರು ಹೋಗಿ ಮಧ್ಯಾಹ್ನ ವೇಳೆಗೆ ಮತ್ತೆ ಆಗಮಿಸಿ ನಂತರ ಸಂಜೆ ನೆಟ್ಟಣಕ್ಕೆ ಮತ್ತೆ ವಾಪಸಾಗುತ್ತಿತ್ತು.
ಬೆಳಗ್ಗೆ ಮಂಗಳೂರಿಗೆ ಹೋಗಿ ಸಂಜೆ ಮನೆಗೆ ಬರುವ ನೂರಾರು ಕಾರ್ಮಿಕರಿಗೆ, ಕೇರಳ ಕಡೆಗೆ ಹೋಗುವವರಿಗೆ ಇದು ಹೆಚ್ಚಿನ ಅನುಕೂಲ ಆಗುತ್ತಿತ್ತು. ಈ ಮಧ್ಯೆ ಎಕ್ಸ್‌ಪ್ರೆಸ್ ರೈಲು ಕೂಡಾ ನಿಲುಗಡೆಯಾಗುತ್ತಿತ್ತು. ಮೀಟರ್‌ಗೇಜ್ ಬದಲು ಬ್ರಾಡ್ ಗೇಜ್‌ಗೆ ಹಳಿ ಪರಿವರ್ತನೆಯಾದ ನಂತರ ಕೋಡಿಂಬಾಳದ ರೈಲು ನಿಲ್ದಾಣ ಅಭಿವೃದ್ಧಿ ಆಗಲಿಲ್ಲ. ಲೋಕಲ್ ಒಂದು ರೈಲು ನಿಲುಗಡೆ ಬಿಟ್ಟು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ರದ್ದಾಯಿತು. ಮೀಟರ್ ಗೇಜ್ ಹಳಿ ಇರುವಾಗ ಇಲ್ಲಿ ಪ್ಲಾಟ್‌ಫಾರ್ಮ್ ಎತ್ತರದಲ್ಲಿತ್ತು. ಬ್ರಾಡ್‌ಗೇಜ್ ಹಳಿಯಾದಾಗ ಹಳಿ ಎತ್ತರವಾಗಿ ಪ್ಲಾಟ್‌ಫಾರ್ಮ್ ಹಳಿಗೆ ಸಮವಾಯಿತು. ಇದರಿಂದಾಗಿ ಮಹಿಳೆಯರು, ವೃದ್ಧರು ರೈಲಿಗೆ ಹತ್ತಿ ಇಳಿಯುವುದೇ ಒಂದು ದೊಡ್ಡ ಸಮಸ್ಯೆ ಆಯಿತು. ಈ ನಡುವೆ ಕೋಡಿಂಬಾಳ ರೈಲ್ವೆ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಆಗ್ರಹಿಸಿ ರೈಲು ತಡೆದು ಪ್ರತಿಭಟನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಂಸದ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಪ್ರಮುಖರು ರೈಲು ನಿಲುಗಡೆ ಮತ್ತು ನಿಲ್ದಾಣ ಅಭಿವೃದ್ಧಿಯ ಭರವಸೆ ನೀಡಿದ್ದರು.