




ಕಡಬ ಪಟ್ಟಣ ಪಂಚಾಯತ್ ಚುನಾವಣೆ ಇಂದು ಮುಂಜಾನೆಯಿಂದ ನಡೆಯುತ್ತಿದೆ.ಪಟ್ಟಣ ಪಂಚಾಯತ್‌ನ 13 ವಾರ್ಡುಗಳ ಚುನಾವಣೆ ನಡೆಯುತ್ತಿದ್ದು ಭಾರಿ ಮಳೆಯ ನಡುವೆಯೂ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತದಾನ ಕೇಂದ್ರಗಳ ಸಮೀಪ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರು ಗೆಲುವಿನ ನಗೆ ಬೀರುತ್ತಾ ಮತದಾರರನ್ನು ಸೆಳೆಯಲು ಕಸರತ್ತು ಮಾಡುತ್ತಿದ್ದಾರೆ.ಮತದಾನ ನಡೆಯುವ ಕೇಂದ್ರಗಳ ಬಳಿ ಮತದಾರರಲ್ಲದವರು ಮತದಾರರನ್ನು ಓಲೈಸಲು ಯತ್ನಿಸುತ್ತಿರುವುದು ಕಂಡು ಬಂದಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಮತಗಟ್ಟೆ ಪ್ರದೇಶ ಬಿಟ್ಟು ತೆರಳುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಜೀಪು ಸೇರಿದಂತೆ ವಾಹನಗಳಲ್ಲಿ ಮತದಾರರನ್ನು ಕರೆತರುತ್ತಿರುವ ದೃಶ್ಯಗಳು ಕಂಡು ಬಂದಿದ್ದು ದೊಡ್ಡ ಕೊಪ್ಪ ವಾರ್ಡ್ 10 ರ ಬಳಿ ಬಿಜೆಪಿಯ ಪಕ್ಷದವರೆನ್ನಲಾದವರು ಜೋಪೊಂದರಲ್ಲಿ ಮತದಾರರನ್ನು ಮತದಾನ ಕೇಂದ್ರದ ಸಮೀಪವೇ ಕರೆದುಕೊಂಡ ಹಿನ್ನಲೆ ಕರ್ತವ್ಯದಲ್ಲಿದ್ದ ಕಡಬ ತಹಶಿಲ್ದಾರ್ ಜೀಪ್ ಸೀಜ್ ಮಾಡುವ ಎಚ್ಚರಿಕೆ ನೀಡಿದ ಘಟನೆಯೂ ನಡೆಯಿತು.
ಕಡಬ ಪೋಲಿಸರಿಂದ ಬಿಗಿ ಬಂದೋಬಸ್ತು ಮಾಡಲಾಗಿದ್ದು ಎಸ್.ಐ ಅಭಿನಂದನ್ , ತನಿಖಾ ವಿಭಾಗದ ಎಸ್.ಐ ಅಕ್ಷಯ ಡವಗಿ ಸಹಿತ ಪೊಲೀಸರ ತಂಡ ಗಸ್ತಿನಲ್ಲಿದೆ. ಮದ್ಯ ಮಾರಾಟ ಸಂಪೂರ್ಣ ನಿಷೇದ ಮಾಡಲಾಗಿದೆ.ತಾಲ್ಲೂಕು ಆಡಳಿತ ಸೌಧದಲ್ಲಿ ಸ್ಟ್ರಾಂಗ್ ರೂಮ್ ವ್ಯವಸ್ಥೆ ಮಾಡಲಾಗಿದೆ ಸಂಜೆ ವೇಳೆಗೆ ಮತದಾನದ ಪ್ರಮಾಣ ಹೆಚ್ಚಳವಾಗಿದ್ದು 3 ಗಂಟೆಯ ಸುಮಾರಿಗೆ 70.79% ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.