




ಕಡಬ ಟೈಮ್ಸ್ ,ಪ್ರಮುಖ ಸುದ್ದಿ : ಕಡಬ: ಸುಳ್ಳು ವರದಿ ನೀಡಿದ ವೈದ್ಯರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಲಾದ ಹಾಗೂ ಹೋರಾಟದ ಎಚ್ಚರಿಕೆ ನೀಡಿದ ಘಟನೆ ಕಡಬ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ನಡೆದಿದೆ.
![]() |
ಎಸ್.ಐ ಅಭಿನಂದನ್ ಅವರ ಅಧ್ಯಕ್ಷತೆಯಲ್ಲಿ ಸಭೆ |
ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಉಪ ನಿರೀಕ್ಷಕ ಅಭಿನಂದನ್ ಅವರ
ಅಧ್ಯಕ್ಷತೆಯಲ್ಲಿ ಜುಲೈ 13 ರವಿವಾರದಂದು ಪರಿಶಿಷ್ಟ
ಜಾತಿ, ಪರಿಶಿಷ್ಟ ಪಂಗಡದವರ ಕುಂದು ಕೊರತೆ ನಿವಾರಣಾ ಸಭೆ ನಡೆಯಿತು . ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ
ಮುಖಂಡ ರಾಘವ ಕಳಾರ ಅವರು, ಪಂಜ ಪ್ರಾಥಮಿಕ ಆಸ್ಪತ್ರೆಗೆ
ಜ್ವರ ಬಂದಿದೆ ಎಂದು ಚಿಕಿತ್ಸೆಗೆ ಹೋಗಿದ್ದ ಬಾಲಕಿಗೆ ಗರ್ಭಿಣಿ ಎಂದು ಸುಳ್ಳು ವರದಿ ನೀಡಲಾಗಿದೆ.
ಅಂದು ಬೆಳಗ್ಗೆ ಹತ್ತು ಗಂಟೆಗೆ ಹೋದವರನ್ನು ಮಧ್ಯಾಹ್ನ
ಎರಡು ಗಂಟೆವರೆಗೆ ಕಾಯಿಸಿ, ಗರ್ಭಿಣಿ ಎಂದು ಸುಳ್ಳು ವರದಿ ನೀಡಿದ್ದಾರೆ. ಆದರೆ ಅಷ್ಟು ಜ್ವರ ಇದ್ದರೂ ಔಷಧಿ ನೀಡಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಈಗಾಗಲೇ ಡಿಎಚ್ಒ ಹಾಗೂ ಸುಬ್ರಹ್ಮಣ್ಯ ಠಾಣೆಗೆ
ದೂರು ನೀಡಲಾಗಿದೆ. ಈ ನಡುವೆ ಅಲ್ಲಿನ ವೈದ್ಯರನ್ನು ಕಡಬ ತಾಲೂಕಿನ ಕೊಯಿಲ ಪ್ರಾಥಮಿಕ ಆಸ್ಪತ್ರೆಗೆ
ವರ್ಗಾವಣೆ ಮಾಡಲಾಗಿದ್ದು, ಮಕ್ಕಳನ್ನು ಅವಮಾನ ಮಾಡಿದ ವೈದ್ಯರು ಕಡಬ ತಾಲೂಕಿಗೆ ಬೇಡ. ಅವರನ್ನು ಅಮಾನತು
ಮಾಡಬೇಕು ಇಲ್ಲವೆ ಮುಂದಿನ ಎರಡು ದಿನಗಳಲ್ಲಿ ಕೊಯಿಲ ಆಸ್ಪತ್ರೆಯಲ್ಲಿ ಧರಣಿ ಕುಳಿತು ಹೋರಾಟ ಮಾಡುತ್ತೇವೆ
ಎಂದು ಎಚ್ವರಿಸಿದರು.
ಕಡಬ ಸಮುದಾಯ ಆಸ್ಪತ್ರೆಗೆ ವೈದ್ಯರು, ಸಿವ್ಬಂದಿಗಳನ್ನು ನೇಮಿಸುವಂತೆ
ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಿದ್ದೇವೆ. ಆದರೆ ಆದರೆ ಇನ್ನೂ ನೇಮಕ ಮಾಡಿಲ್ಲ. ಅಲ್ಲಿರುವ ಹೊಸ
ಡಾಕ್ಟರ್ ಗಳು ಕಲಿಯುವವರು, ಪ್ರಥಮ ಚಿಕಿತ್ಸೆ ನೀಡುವುದಿಲ್ಲ
ಎಂದೂ ಆರೋಪಿಸಿದರು. ಆರೋಗ್ಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವುದನ್ನು ಸಮರ್ಪಕವಾಗಿ ನಡೆಸಬೇಕು
ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸಭೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಿ: ಠಾಣೆಯಲ್ಲಿ ನಡೆಯುವ ಎಸ್.ಸಿ., ಎಸ್.ಟಿ. ಸಭೆಯ ಬಗ್ಗೆ ಸಭೆಯಂದು, ಒಂದು ದಿನದ ಹಿಂದೆ ಮಾಹಿತಿ ಠಾಣೆಯಿಂದ ನೀಡಲಾಗುತ್ತದೆ. ಇದು ಸಭೆಗೆ ಜನ ಸೇರಲು ಅಡ್ಡಿಯಾಗಿದ್ದು, ಸಭೆ ನಡೆಸುವ ಕೆಲ ದಿನಗಳ ಹಿಂದೆ ಸಭೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು, ಠಾಣೆಯ ಗ್ರೂಪ್ ಗಳಿಗೆ ಮಾಹಿತಿ ಹಾಕಬೇಕು ಎಂದು ಮುಖಂಡರು ಒತ್ತಾಯಿಸಿದರು. ಸಮಸ್ಯೆಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಪೊಲೀಸ್ ವಾಟ್ಸಪ್ ಗ್ರೂಪ್ ಗಳನ್ನು ಮುಕ್ತ (ಅಡ್ಮಿನ್ ಒನ್ಲಿ ತೆರವು ಮಾಡಲು) ಮಾಡುವಂತೆ ಸಲಹೆ ನೀಡಲಾಯಿತು.
ಹೊಸ್ಮಠ-ಇಚ್ಲಂಪಾಡಿ ರಸ್ತೆಯ ಕೊಕ್ಕದಕಾಡು ಸಮೀಪದ ಸೇತುವೆ
ಶಿಥಿಲಗೊಂಡಿರುವ ಬಗ್ಗೆ, ಕುಟ್ರುಪಾಡಿ ಭಾಗದಲ್ಲಿ ಅಪಾಯಕಾರಿ ಮರಗಳಿರುವ ಬಗ್ಗೆ, ಪಿಜಕಳ ಭಾಗದಲ್ಲಿ
ಸಭೆ ನಡೆಯುವುದು ಗೊತ್ತಾಗುವುದಿಲ್ಲ ಎಂದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಎಸೈ ಅಭಿನಂದನ್ ಮಾತನಾಡಿ, ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಂಚಕರು ಹೊಸ ಹೊಸ ತಂತ್ರದ ಮೂಲಕ ತಮ್ಮ ವಂಚನೆಗಳನ್ನು ನಡೆಸಿ ಅಮಾಯಕರಿಂದ ಸಾವಿರ, ಲಕ್ಷ, ಕೋಟಿ ಹಣ ಸುಳಿಗೆ ಮಾಡುತ್ತಿದ್ದಾರೆ. ಆದ್ದರಿಂದ ಒಟಿಪಿ ನೀಡುವುದು, ಅಪರಿಚಿತರ ಕರೆ ಸ್ವೀಕಾರ, ಅಪರಿಚಿತರು ಕಳುಹಿಸಿದ ಲಿಂಕ್ ತೆರೆಯುವುದು, ವೀಡಿಯೋ ಕಾಲ್ ಮಾಡುವುದು ಮಾಡಲೇ ಬಾರದು. ಆನ್‌ಲೈನ್ ಮೂಲಕ ಹಣ ಗಳಿಕೆ ಜಾಲಕ್ಕೆ ಬಲಿಯಾಗದಿರಿ ಎಂದ ಎಸೈ ಅಭಿನಂದನ್, ಸೈಬರ್ ವಂಚನೆ ನಡೆದಲ್ಲಿ 1930 ಗೆ ಕರೆ ಮಾಡಿ ಹಾಗೂ 112 ಸಹಾಯ ವಾಣಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಮುಖಂಡರಾದ ರಾಘವ ಕಳಾರ, ಸುಮನ, ಕೆ.ಗಿರಿಜ, ಆನಂದ ಕುಮಾರ್
ಕಜೆ, ಬಾಬು ತುಂಬೆತ್ತಡ್ಕ ಕಡಬ, ವಾಣಿ ಬನಾರಿ, ಉಮೇಶ್ ಕೋಡಿಂಬಾಳ, ವಸಂತ ಕುಬಲಾಡಿ, ರಾಜರತ್ನ, ಕಿಶೋರ್,
ಅಣ್ಣು ಪರಪ್ಪು, ಕೆ.ಹರ್ಷ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.