




ಕಡಬ ಟೈಮ್ಸ್ , ನೆಲ್ಯಾಡಿ: ಕುಟುಂಬ ಕಲಹವು ಗಂಭೀರ ಸ್ವರೂಪ ಪಡೆದುಕೊಂಡು ಅಣ್ಣ ತಮ್ಮಂದಿರ ನಡುವೆ ಕತ್ತಿಯಿಂದ ಹಲ್ಲೆಮಾಡಿಕೊಂಡು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾದ ಘಟನೆ ನೆಲ್ಯಾಡಿಯಿಂದ ವರದಿಯಾಗಿದೆ.
ಕಡಬ
ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ಈ ಘಟನೆ
ಜು.16 ರಂದು ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಗಂಭೀರ ಗಾಯಗೊಂಡ ವ್ಯಕ್ತಿಯನ್ನು ರಾಜಶೇಖರ್(37)
ಎಂದು ಗುರುತಿಸಲಾಗಿದೆ.
ರಾಜಶೇಖರ್ ಅವರು ಮನೆಯಲ್ಲಿ ಇರುವ ವೇಳೆ ಅವರ ತಮ್ಮ ಅಸಭ್ಯ ಶಬ್ದಗಳಿಂದ ನಿಂದಿಸಿ ಇಬ್ಬರ ನಡುವೆ ವಾಗ್ವಾದ ತೀವ್ರವಾಗಿ
ಮುಂದುವರಿದಾಗ ಅಣ್ಣ ಕತ್ತಿಯೊಂದನ್ನು ಹಿಡಿದುಕೊಂಡು ರಾಜಶೇಖರ್‌ರ ಮೇಲೆ ದಾಳಿ
ನಡೆಸಿರುವುದಾಗಿ ಹೇಳಲಾಗಿದೆ.
ದಾಳಿಯಿಂದ ರಾಜಶೇಖರ್ ತಲೆ, ಹಣೆ, ಕೆನ್ನೆ, ಕೈ ಮತ್ತು ಕಾಲು ಸೇರಿ ಹಲವು ಅಂಗಾಂಗಗಳಿಗೆ ತೀವ್ರ ಗಾಯವಾಗಿದ್ದು. ಗಂಭೀರ ಗಾಯಗೊಂಡ ಅವರನ್ನು ಮತ್ತೋರ್ವ ಸಹೋದರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಗಾಯಾಳು ರಾಜಶೇಖರ್ ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮನೋಜ್‌ಕುಮಾರ್ ಮತ್ತು ಜಯರಾಜ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 63/2025 ಕಲಂ: 352, 118(1) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.