




ಕಡಬ ಟೈಮ್ಸ್ , ಪ್ರಮುಖ ಸುದ್ದಿ, :ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕಗೊಂಡಿರುವ ವ್ಯವಸ್ಥಾಪನಾ ಸಮಿತಿಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ .
ವ್ಯವಸ್ಥಾಪನಾ ಸಮಿತಿಯನ್ನು ನಿಯಮಬಾಹಿರವಾಗಿ ನೇಮಿಸಿದ್ದು, ಆ ಸಮಿತಿಗೆ ತಡೆಯಾಜ್ಞೆ ನೀಡಬೇಕೆಂದು ಆಕಾಶ್ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆಗೆ ಹಲವು ಬಾರಿ ದಿನಾಂಕ ನಿಗದಿಯಾಗಿ ಕಲಾಪ ನಡೆದಿತ್ತು. ತಡೆಯಾಜ್ಞೆ ಸಿಕ್ಕೇ ಸಿಗುತ್ತದೆ ಎಂದು ನ್ಯಾಯಾಲಯದ ಮೆಟ್ಟಿಲೇರಿದವರು ಮತ್ತು ಅವರ ಪರ ಇರುವವರು ಹೇಳಿಕೊಳ್ಳುತ್ತಿದ್ದರೆ, ದಾವೆಯ ವಿಚಾರಣೆಯೇ ಇದುವರೆಗೆ ನಡೆದಿಲ್ಲ ಎಂದು ಈಗಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿಯವರು ಮತ್ತು ಅವರ ಪರ ಇರುವವರು ಹೇಳುತ್ತಿದ್ದರು. ವಿಚಾರಣೆಗೆ ಪ್ರತಿ ಬಾರಿ ದಿನಾಂಕ ನಿಗದಿಯಾದಾಗಲೂ ಕೆಲವು ಬಾರಿ ವಿಚಾರಣೆ ನಡೆಯದೆಯೇ, ಕೆಲವು ದಿನಗಳಲ್ಲಿ ಸ್ವಲ್ಪ ವಿಚಾರಣೆ ನಡೆದು ಮಂದಿನ ದಿನಾಂಕ ನೀಡಲಾಗುತ್ತಿತ್ತು.
ಅರ್ಜಿದಾರರು ತಡೆಯಾಜ್ಞೆ ಕೇಳುವಾಗ ಸರಕಾರವನ್ನು ಮಾತ್ರ
ಪ್ರತಿವಾದಿಯನ್ನಾಗಿ ಮಾಡಿದ್ದರು. ಈ ಕೇಸಿನಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ತನ್ನನ್ನು ಕೂಡ
ಪ್ರತಿವಾದಿಯನ್ನಾಗಿ ಮಾಡಬೇಕೆಂದು ಹರೀಶ್ ಇಂಜಾಡಿ ಯವರು ಹೈಕೋರ್ಟನ್ನು ಕೇಳಿಕೊಂಡಿದ್ದರು. ಈ ಎಲ್ಲದರ
ಬಗ್ಗೆ ಇಂದು ಜು.15 ರಂದು ಹೈಕೋರ್ಟಲ್ಲಿ ವಿಚಾರಣೆ ನಡೆಯಿತು.
ಅರ್ಜಿದಾರರ ಪರವಾಗಿ ನ್ಯಾಯವಾದಿ ವಿವೇಕ್ ರೆಡ್ಡಿಯವರು
ವಾದ ಮಂಡಿಸಿದರೆ, ಸರಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ದೇವದಾಸ್ , ಹರೀಶ್ ಇಂಜಾಡಿಯವರ
ಪರವಾಗಿ ಹಿರಿಯ ಕೌನ್ಸೆಲ್ ರವಿಶಂಕರ್ ಹಾಗೂ ನ್ಯಾಯವಾದಿ ಕರುಣಾಕರ ಗೌಡರು ವಾದ ಮಂಡಿಸಿದರು.
ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ವ್ಯವಸ್ಥಾಪನಾ
ಸಮಿತಿ ನೇಮಕದ ವಿಧಾನ ಕಾನೂನು ಪ್ರಕಾರವೇ ಇರುವ ಕಾರಣ ತಡೆಯಾಜ್ಞೆ ನೀಡಲು ನಿರಾಕರಿಸಿದರು. ಹರೀಶ್
ಇಂಜಾಡಿಯವರನ್ನು ಪ್ರತಿವಾದಿಯಾಗಿ ಮಾಡಲು ಒಪ್ಪಿದ ನ್ಯಾಯಮೂರ್ತಿಯವರು, ಎಲ್ಲ ಒಂಬತ್ತು ಮಂದಿ ವ್ಯವಸ್ಥಾಪನಾ
ಸಮಿತಿ ಸದಸ್ಯರನ್ನೂ ಪ್ರತಿವಾದಿಗಳನ್ನಾಗಿ ಮಾಡಿ ನೋಟೀಸು ಜಾರಿ ಮಾಡಲು ನಿರ್ದೇಶಿಸಿದರೆಂದು ತಿಳಿದುಬಂದಿದೆ.