Dharmastala:ಧರ್ಮಸ್ಥಳ ಸಮಾಧಿ ರಹಸ್ಯ:ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಉತ್ಖನನ ಕಾರ್ಯ: SIT ಸೂಚನೆ ಮೇರೆಗೆ 12 ಕಾರ್ಮಿಕರನ್ನು ನಿಯೋಜಿಸಿದ ಗ್ರಾಮ ಪಂಚಾಯತ್

Dharmastala:ಧರ್ಮಸ್ಥಳ ಸಮಾಧಿ ರಹಸ್ಯ:ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಉತ್ಖನನ ಕಾರ್ಯ: SIT ಸೂಚನೆ ಮೇರೆಗೆ 12 ಕಾರ್ಮಿಕರನ್ನು ನಿಯೋಜಿಸಿದ ಗ್ರಾಮ ಪಂಚಾಯತ್

Kadaba Times News

 ಕಡಬ ಟೈಮ್ಸ್, ಪ್ರಮುಖ ಸುದ್ದಿ:  ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆ ನಡೆಯಲಿದೆ ಎಂದು ಎಸ್.ಐ.ಟಿ ಯ ಉನ್ನತ ಮೂಲಗಳು ಮಾಹಿತಿ ನೀಡಿದೆ‌.


ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರುಗಳ ತಂಡ  ಕೂಡ ಎಸ್.ಐ.ಟಿ ಆದೇಶದ ಮೇರೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ಅಸ್ಥಿಪಂಜರ ಹೊರತೆಗೆಯುವ ಕಾರ್ಯಾಚರಣೆಗೆ ತಯಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಈ ಧರ್ಮಸ್ಥಳದ ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಸುಕುಧಾರಿ ವ್ಯಕ್ತಿಯೊಬ್ಬ ಗುರುತಿಸಿದ 13 ಸ್ಥಳಗಳಲ್ಲಿ ಶವಗಳ ಅವಶೇಷಗಳಿಗಾಗಿ ವಿಶೇಷ ತನಿಖಾ ದಳ (ಎಸ್ಐಟಿ), ಪುತ್ತೂರು ಸಹಾಯಕ ಆಯುಕ್ತರ (ಎ.ಸಿ.) ನೇತೃತ್ವದಲ್ಲಿ ಮಂಗಳವಾರ (ಇಂದು) ಮಹತ್ವದಉತ್ಖನನ ಕಾರ್ಯ ಆರಂಭಿಸಲಿದೆ.

ತನಿಖೆಯ ಭಾಗವಾಗಿ ಸೋಮವಾರ (ಜು. 28) ಎಸ್ಐಟಿ ಎದುರು ಹಾಜರಾದ ಮುಸುಕುಧಾರಿ ವ್ಯಕ್ತಿ, ನೇತ್ರಾವತಿ ನದಿ ದಂಡೆಯ ಅರಣ್ಯ ಪ್ರದೇಶದಲ್ಲಿ ತಾನು ಶವಗಳನ್ನು ಹೂತಿದ್ದೇನೆ ಎನ್ನಲಾದ 13 ಸ್ಥಳಗಳನ್ನು ಗುರುತಿಸಿದ್ದ. ಈ ಬೆಳವಣಿಗೆಯಿಂದ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪಿದೆ.

ಎಸ್ಐಟಿ ಅಧಿಕಾರಿಗಳ ನಿರ್ದೇಶನದ ಮೇರೆಗೆ, ಸ್ಥಳೀಯ ಗ್ರಾಮ ಪಂಚಾಯಿತಿ ಉತ್ಖನನ ಕಾರ್ಯಕ್ಕಾಗಿ 12 ಕಾರ್ಮಿಕರನ್ನು ನಿಯೋಜಿಸಿದೆ. ಮುಸುಕುಧಾರಿಯು ಗುರುತಿಸಿದ ಸ್ಥಳಗಳಿಗೆ ಭಾರೀ ಮಳೆಯನ್ನೂ ಲೆಕ್ಕಿಸದೆ, ಶಸ್ತ್ರಸಜ್ಜಿತ ಎಎನ್ಎಫ್ ಸಿಬ್ಬಂದಿ ಸೋಮವಾರ ರಾತ್ರಿಯಿಡೀ ಬಿಗಿ ಭದ್ರತೆ ಒದಗಿಸಿದ್ದಾರೆ.


ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರ ಸಮ್ಮುಖದಲ್ಲಿ ಉತ್ಖನನ ಕಾರ್ಯ ನಡೆಯಲಿದೆ. ಪ್ರತಿಯೊಂದು ನಿರ್ದಿಷ್ಟ ಸ್ಥಳಕ್ಕೂ ಹೊರಗಿನವರಿಗೆ ಕಾಣದಂತೆ ತೆರೆಮರೆ ವ್ಯವಸ್ಥೆ ಮಾಡಲಾಗಿದೆ.ತೆರೆಯ ಒಳಗೆ ಎಸ್ಐಟಿ ಅಧಿಕಾರಿಗಳು, ವಿಧಿವಿಜ್ಞಾನ ಪ್ರಯೋಗಾಲಯ (FSL), ಸ್ಥಳ ಪರಿಶೀಲನಾ ಅಧಿಕಾರಿಗಳು (SOCO), ಪಂಚರು, ಸಾಕ್ಷಿದಾರ (ಮುಸುಕುಧಾರಿ) ಮತ್ತು ಪೊಲೀಸರ ಉಪಸ್ಥಿತಿಯಲ್ಲಿ ಮಣ್ಣು ಅಗೆಯುವ ಪ್ರಕ್ರಿಯೆ ಆರಂಭವಾಗಲಿದೆ. ಪ್ರತಿ ಸ್ಥಳದಲ್ಲಿ ಕನಿಷ್ಠ 6 ಅಡಿಗಳಷ್ಟು ಆಳಕ್ಕೆ ಅಗೆಯಲು ನಿರ್ಧರಿಸಲಾಗಿದೆ. ಸಾಕ್ಷಿದಾರನು ಸೂಚಿಸಿದರೆ ಮತ್ತಷ್ಟು ಆಳಕ್ಕೆ ಅಗೆದು ಮುಂದುವರಿಸಲಾಗುವುದು ಎಂದು ತಿಳಿದುಬಂದಿದೆ.

ಒಂದು ವೇಳೆ ಉತ್ಖನನದ ವೇಳೆ ಯಾವುದೇ ಅಸ್ಥಿಪಂಜರ ಅಥವಾ ಮೃತದೇಹದ ಭಾಗಗಳು ಪತ್ತೆಯಾದರೆ, ಸ್ಥಳದಲ್ಲಿಯೇ ಇರುವ ವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಬಳಿಕ ವೈಜ್ಞಾನಿಕ ವಿಧಿವಿಧಾನಗಳ ಅನ್ವಯ ಮಾದರಿಗಳನ್ನು ಸಂಗ್ರಹಿಸಿ, ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುವುದು. ಅವಶೇಷಗಳು ಲಭ್ಯವಾಗದಿದ್ದಲ್ಲಿ, ಆ ಸ್ಥಳವನ್ನು ದಾಖಲೆಗಾಗಿ ಗುರುತು ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಮಹತ್ವದ ತಿರುವು ನೀಡಿರುವ ಈ ಉತ್ಖನನ ಕಾರ್ಯದ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದ್ದು, ಧರ್ಮಸ್ಥಳದ ಸಮಾಧಿ ರಹಸ್ಯ ಬಯಲಾಗುವುದೇ ಎಂಬ ಕುತೂಹಲ ಗರಿಗೆದರಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top