






ಕಡಬ ಟೈಮ್ಸ್ ,ಪ್ರಮುಖ ಸುದ್ದಿ,: ಪಟ್ಟಣ ಸುದ್ದಿ : ಅಗೇಲು ಹಾಗೂ ಕೋಲ ಸೇವೆಗೆ ಪ್ರಸಿದ್ಧಿ ಪಡೆದಿರುವ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ರವಿವಾರ ಭಕ್ತರಿಂದ 3,871 ಅಗೇಲು ಸೇವೆಗಳು ಸಂದಾಯವಾಗಿದ್ದು, ಇದು ಈ ವರ್ಷದಲ್ಲಿ ಸಂದಾಯವಾದ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ.
ಹೆಚ್ಚಿನ ಸೇವೆಗಳು ಸಂದಾಯವಾದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆಯೂ ಹೆಚ್ಚಿತ್ತು.ಕಳೆದ ವಾರ ಸುಮಾರು 3,500ರಷ್ಟು ಅಗೇಲು ಸೇವೆ ಸಂದಾಯವಾಗಿತ್ತು. ವಾರದಲ್ಲಿ ಮೂರು ದಿನ ಅಗೇಲು ಸೇವೆ ಸಂದಾಯವಾಗುತ್ತಿದ್ದರೂ, ರವಿವಾರ ರಜಾ ದಿನವಾದ ಕಾರಣ ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸೇವೆ ಸಂದಾಯ ಮಾಡುತ್ತಾರೆ. ಸಾಮಾನ್ಯ ದಿನಗಳಲ್ಲಿ ಮಧ್ಯಾಹ್ನ 1.30ರ ಬಳಿಕ ಅಗೇಲು ಸೇವೆ ಪ್ರಸಾದ ನೀಡಲು ಆರಂಭಗೊಂಡರೆ ರವಿವಾರ ಹೆಚ್ಚಿನ ಸೇವೆ ಇದ್ದ ಕಾರಣ ಮಧ್ಯಾಹ್ನ 3ರ ಬಳಿಕ ಪ್ರಸಾದ ನೀಡುವ ಕಾರ್ಯ ಆರಂಭಗೊಂಡು ಸಂಜೆ 6 ಗಂಟೆಯವರೆಗೂ ಸಾಗಿತ್ತು. ಭಕ್ತರ ಸಂಖ್ಯೆಯ ಜತೆಗೆ ಪಣೋಲಿಬೈಲು ಜಂಕ್ಷನ್ ಪ್ರದೇಶದಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಿತ್ತು.
ವಿಶೇಷವಾಗಿ ಮಕ್ಕಳ ಶೈಕ್ಷಣಿಕ ವಿಚಾರವಾಗಿ ಈ ಸಮಯದಲ್ಲಿ ಅಗೇಲು ಸೇವೆ ಸಂದಾಯವಾಗುವುದರಿಂದ ಸೇವೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರೀಕ್ಷಾ ಫಲಿತಾಂಶಗಳು ಬಂದು ಮಕ್ಕಳ ಶಾಲಾ ದಾಖಲಾತಿಗಳು ಪೂರ್ಣಗೊಂಡ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಸೇವೆ ಸಂದಾಯ ಮಾಡುತ್ತಾರೆ. ಪ್ರತಿವರ್ಷವೂ ಮೇ, ಜೂನ್ ತಿಂಗಳ ರವಿವಾರದ ದಿನ ಹೆಚ್ಚಿನ ಅಗೇಲು ಸೇವೆ ಸಂದಾಯವಾಗುತ್ತಿದ್ದು, ಕಳೆದ ವರ್ಷ ಜೂನ್ 2ರಂದು 3,908 ಅಗೇಲು ಸೇವೆಗಳು ಸಂದಾಯವಾಗಿತ್ತು.
2023ರ ಜೂನ್ 25ರಂದು 3,852 ಅಗೇಲು
ಸೇವೆ ಸಂದಾಯವಾಗಿತ್ತು. ಮುಂದಿನ ಕೆಲ ರವಿವಾರಗಳಲ್ಲೂ ಹೆಚ್ಚಿನ ಸೇವೆ ಸಂದಾಯವಾಗುವ ಸಾಧ್ಯತೆ ಇದೆ
ಎಂದು ಕ್ಷೇತ್ರದ ಮೂಲಗಳು ತಿಳಿಸಿದೆ.