ನಮ್ಮ ಕಡಬಕ್ಕೆ ಹೆಮ್ಮೆ:ಯೋಗದಲ್ಲಿ ವಿಶ್ವ ದಾಖಲೆ ಮೂಲಕ ಗಮನ ಸೆಳೆಯುತ್ತಿರುವ ಗ್ರಾಮೀಣ ಪ್ರದೇಶದ ಎಳೆಯ ಬಾಲಕಿ

ನಮ್ಮ ಕಡಬಕ್ಕೆ ಹೆಮ್ಮೆ:ಯೋಗದಲ್ಲಿ ವಿಶ್ವ ದಾಖಲೆ ಮೂಲಕ ಗಮನ ಸೆಳೆಯುತ್ತಿರುವ ಗ್ರಾಮೀಣ ಪ್ರದೇಶದ ಎಳೆಯ ಬಾಲಕಿ

Kadaba Times News

 ಕಡಬ ಟೈಮ್ಸ್ ,ಪ್ರಮುಖ ಸುದ್ದಿ:  ಮಂಗಳೂರು: ಯೋಗದ ವಿವಿಧ ಆಸನಗಳನ್ನು ಲೀಲಾಜಾಲವಾಗಿ ಪ್ರದರ್ಶಿಸುತ್ತಾ ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಗಳಿಸಿರುವ ಗ್ರಾಮೀಣ ಪ್ರದೇಶದ ಎಳೆಯ ಬಾಲಕಿಯೊಬ್ಬಳು ಎರಡು ವಿಶ್ವ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡು ಗಮನಸೆಳೆಯುತ್ತಿದ್ದಾಳೆ.


ಇದೀಗ ಜೂ.21 ರಂದು ಬೆಂಗಳೂರಿನಲ್ಲಿ ನಡೆಯುವ  ಸಿ.ಎಂ ಸಿದ್ದರಾಮಯ್ಯ ಸಮ್ಮುಖ ಐದು ಸಾವಿರ  ಯೋಗಪಟುಗಳು ಭಾಗವಹಿಸುವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದಾಳೆ

ಗ್ರಾಮೀಣ ಪ್ರತಿಭೆಯ ಹೆಸರು ಅಕ್ಷಯ ಬಿ.ಎಂ. ಈಕೆ ಕಡಬ ತಾಲೂಕಿನ ಏನೆಕಲ್ಲು ಗ್ರಾಮದಲ್ಲಿರುವ ದ.ಕ. ಜಿಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ.ಏನೆಕಲ್ಲು ಗ್ರಾಮದ ಬಾಲಾಡಿ ಎಂಬ ಗ್ರಾಮೀಣ ಪ್ರದೇಶದ ಅಕ್ಷಯ ಕಳೆದ ಮೇ 9ರಿಂದ 12ರವರೆಗೆ ದುಬೈಯಲ್ಲಿ ನಡೆದ ಅಂತರ್‌ರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್-2025ರಲ್ಲಿ ಚಿನ್ನ ಜಯಿಸಿದ್ದಾಳೆ. ಜೊತೆಗೆ ಯೋಗದಲ್ಲಿ 2024ರಲ್ಲಿ ವರ್ಲ್ಡ್‌ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್ ಸಹಿತ ಎರಡು ವಿಶ್ವ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿರುವ ಸಾಧಕಿಯಾಗಿದ್ದಾಳೆ.



ಬಾಲಾಡಿಯ ಮೋಹನ್ ಕುಮಾರ್ ಮತ್ತು ದಿವ್ಯಾ ಕುಮಾರಿಯ ಪುತ್ರಿಯಾಗಿರುವ ಅಕ್ಷಯ, ಕಲಿಕೆಯಲ್ಲೂ ಮುಂದಿರುವ ವಿದ್ಯಾರ್ಥಿನಿ. ಶಾಲೆಯಲ್ಲಿ ಯೋಗ ತರಬೇತಿ ನಡೆಯುತ್ತಿರುವಾಗ ಅಕ್ಷಯಳ ಆಸಕ್ತಿಯನ್ನು ಗಮನಿಸಿದ ಊರಿನ ಹಿರಿಯರಾದ ಗಿರಿಯಪ್ಪ ಗೌಡ, ಆಕೆಗೆ ಯೋಗದಲ್ಲಿ ಹೆಚ್ಚಿನ ತರಬೇತಿ ನೀಡುವಂತೆ ಪೋಷಕರಿಗೆ ಸಲಹೆ ನೀಡಿದರು. ಶಾಲೆಯ ಶಿಕ್ಷಕರೂ ಪ್ರೋತ್ಸಾಹ ನೀಡಿದರು. ಅದರಂತೆ ಮುಂದೆ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಬಳಿ ತರಬೇತಿ ಪಡೆದ ಅಕ್ಷಯ, ಹಂತಹಂತವಾಗಿ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತರ್‌ರಾಷ್ಟ್ರ ಮಟ್ಟದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ.


2024ರ ಫೆಬ್ರವರಿಯಲ್ಲಿ ಯೋಗದ ಒಂದೇ (ಹನುಮಾನಾಸನ)ಆಸನದ ಸ್ಥಿತಿಯಲ್ಲಿ 50 ನಿಮಿಷ 20 ಸೆಕೆಂಡ್ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಎರಡು ವಿಶ್ವ ದಾಖಲೆಗಳನ್ನು ಅಕ್ಷಯ ತನ್ನ ಹೆಸರಿಗೆ ಬರೆಸಿಕೊಂಡಿದ್ದಾಳೆ.


ದುಬೈಯಲ್ಲಿ ಮೇ 9ರಿಂದ 12ರ ವರೆಗೆ ನಿಗದಿಯಾಗಿದ್ದ ಅಂತರ್‌ರಾಷ್ಟ್ರ ಮಟ್ಟದ ಯೋಗ ಚಾಂಪಿಯನ್‌ಶಿಪ್-2025ನಲ್ಲಿ ಭಾಗಿಯಾಗಲು ಅಕ್ಷಯಳಿಗೆ ಆಹ್ವಾನ ಬಂದಿತ್ತು. ಇದಕ್ಕೆ ತಗಲುವ ವೆಚ್ಚದ ಬಗ್ಗೆ ಯೋಚಿಸಿದ ಅಕ್ಷಯಳ ಹೆತ್ತವರು ಮಗಳನ್ನು ಕಳುಹಿಸದಿರಲು ನಿರ್ಧರಿಸಿದ್ದರು. ಆದರೆ ಬಾಲಕಿಯ ಸಾಧನೆಯ ಬಗ್ಗೆ ವಿಶ್ವಾಸ ಹೊಂದಿದ್ದ ಏನೆಕಲ್ಲು ಗ್ರಾಮದ ಜನರು ಪ್ರಯಾಣದ ವೆಚ್ಚವನ್ನು ತಾವೇ ಭರಿಸಲು ನಿರ್ಧರಿಸಿ, ಆಕೆಯನ್ನು ಸ್ಪರ್ಧೆಗೆ ಕಳುಹಿಸಿದ್ದರು. ಊರವರ ನಿರೀಕ್ಷೆ ಹುಸಿ ಮಾಡದ ಅಕ್ಷಯ, 10 ವರ್ಷದೊಳಗಿನವರ ವಿಭಾಗದಲ್ಲಿ ಚಿನ್ನ ಗೆದ್ದು ಬೀಗಿದ್ದಳು. ಮಗಳಿಗೆ ಯೋಗದ ಬಗ್ಗೆ ಇದ್ದ ಅದಮ್ಯ ಪ್ರೀತಿ, ಶಿಕ್ಷಕರು ಯೋಗ ಗುರುಗಳ ಹಾಗೂ ಊರಿನ ಜನರ ಪ್ರೋತ್ಸಾಹದಿಂದ ಅಂತರ್‌ರಾಷ್ಟ್ರ ಮಟ್ಟದಲ್ಲಿ ಅವಳಿಗೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ ಅಕ್ಷಯಳ ತಾಯಿ ದಿವ್ಯಾ ಕುಮಾರಿ.

 


9ನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ 2023ರ ಜುಲೈಯಲ್ಲಿ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ 9ನೇ ಯೋಗ ಚಾಂಪಿಯನ್‌ಶಿಪ್‌ನಲ್ಲಿ 9 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ 6ನೇ ಸ್ಥಾನ ಗಳಿಸಿದ್ದಾಳೆ. 2023ರ ಆಗಸ್ಟ್‌ನಲ್ಲಿ ಬಿ.ಕೆ.ಎಸ್.ಐಯ್ಯಂಗಾರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ನಡೆದ 7ನೇ ವರ್ಷದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿರುವ ಅಕ್ಷಯ, ವರ್ಲ್ಡ್ ಫಿಟ್ನೆಸ್ ಫೆಡರೇಶನ್ ಆಫ್ ಯೋಗಾಸನ ಸ್ಪೋರ್ಟ್ಸ್ ಕರ್ನಾಟಕ ರಾಜ್ಯ ಇದರ ವತಿಯಿಂದ 2023ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಯೋಗಾಸನ ಕ್ರೀಡಾ ಚಾಂಪಿಯನ್‌ಶಿಪ್‌ನ ಸಬ್ ಜೂನಿಯರ್ ಬಾಲಕಿಯರ ವಿಭಾಗ ದಲ್ಲಿ 7ನೇ ಸ್ಥಾನ ಗಳಿಸಿದ್ದಾಳೆ. ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ಇದರ ವತಿಯಿಂದ ಜನವರಿಯಲ್ಲಿ ನಡೆದ 15ನೇ ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್‌ಶಿಪ್-2024ರಲ್ಲಿ 12 ವರ್ಷದ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಅಕ್ಷಯ ತೃತೀಯ ಸ್ಥಾನ ಗಳಿಸಿದ್ದಾಳೆ.

 

ಶಿವಮೊಗ್ಗದ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್, ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಇದರ ಸಹಯೋಗದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ 2024ರ ಫೆಬ್ರವರಿಯಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಿದ್ದ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯ 10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಅಕ್ಷಯ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾಳೆ.

 


ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕಡಬದ ಬಿಳಿನೆಲೆ ಬೈಲು ಸರಕಾರಿ ಹಿ. ಪ್ರಾ. ಶಾಲೆ, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯದ ಸಹಯೋಗದಲ್ಲಿ 2024ರ ನವೆಂಬರ್‌ನಲ್ಲಿ ಬಿಳಿನೆಲೆ ಬೈಲು ಸರಕಾರಿ ಶಾಲೆಯಲ್ಲಿ ನಡೆದ ಅಂತರ್ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿರುವ ಅಕ್ಷಯ, 2024ರ ಅಕ್ಟೋಬರ್‌ನಲ್ಲಿ ಕರ್ನಾಟಕ ಸರಕಾರದ ಯೋಗ ದಸರಾ ಉಪ ಸಮಿತಿಯು 2024ರ ಅಕ್ಟೋಬರ್‌ನಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯ 10 ವರ್ಷದ ವಯೋಮಿತಿಯ ಬಾಲಕಿ ಯರ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾಳೆ.

 

ಬೆಂಗಳೂರಿನ ಗಂಗಾ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ 2024ರ ಸೆಪ್ಟಂಬರ್‌ನಲ್ಲಿ ನಡೆದ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ 10 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚಿನ್ನ ಜಯಿಸಿರುವ ಅಕ್ಷಯ, ಮೂಡುಬಿದಿರೆಯ ಶ್ರೀ ವೀರಮಾರುತಿ ಸೇವಾ ಟ್ರಸ್ಟ್ ಆಶ್ರಯದಲ್ಲಿ 2024ರ ಅಕ್ಟೋಬರ್‌ನಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯ ಕಿರಿಯ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಕೊರಳ ಹಾರವಾಗಿಸಿಕೊಂಡಿದ್ದಾಳೆ.


ನಟ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಬೆಂಗಳೂರಿನ ರಾಜಾಜಿ ನಗರದಲ್ಲಿ ಅವಿನಾಶ್ ಯೋಗ ಮತ್ತು ಅರೋಬಿಕ್ಸ್ ಸಂಸ್ಥೆ ಮತ್ತು ಆಚಾರ್ಯ ಯೋಗ ಯೂತ್ ಕ್ಲಬ್ ಜಂಟಿ ಆಶ್ರಯ ದಲ್ಲಿ ಆಯೋಜಿಸಿದ್ದ 3ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯ 10 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲೂ ಅಕ್ಷಯ ಚಿನ್ನದ ಪದಕ ಗಳಿಸಿದ್ದಾಳೆ. ಮೈಸೂರಿನಲ್ಲಿ 2025ರ ಫೆಬ್ರವರಿಯಲ್ಲಿ ಸ್ನೇಹ ಸಂಗಮ ಯೋಗ ಬಳಗ ಮತ್ತು ಪತಂಜಲಿ ಯೋಗ ಕೇಂದ್ರ ಹಾಗೂ ಭುವನ್ ರಾಜ್ ಫೌಂಡೇಶನ್ ಸಹಯೋಗದಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯ 12 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ ಸಾಧನೆ ಮಾಡಿದ್ದಾಳೆ.

 

ಏನೆಕಲ್ಲು ಸರಕಾರಿ ಶಾಲೆಯ 5ನೇ ತರಗತಿಯ ವಿದ್ಯಾರ್ಥಿಯಾಗಿರುವ ಅಕ್ಷಯ, ಕಲಿಕೆಯಲ್ಲೂ ಮುಂದಿದ್ದಾಳೆ. ಹೆತ್ತವರಾದ ಮೋಹನ್ ಕುಮಾರ್- ದಿವ್ಯ ಕುಮಾರಿ ಆರ್ಥಿಕ ಸವಾಲುಗಳ ನಡುವೆಯೂ ಮಗಳ ಸಾಧನೆಗೆ ಅಡ್ಡಿಯಾಗದಂತೆ ಪ್ರೋತ್ಸಾಹ ನೀಡುತ್ತಿದ್ದಾರೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top