


ಕಡಬ ಟೈಮ್ಸ್(KADABA TIMES): ಇಚ್ಲಂಪಾಡಿ ಹಬ್ಬವೆಂದೇ ಪ್ರಸಿದ್ದಿ ಹೊಂದಿರುವ ಸಂತ ಜೋರ್ಜರ ಹಬ್ಬ ಈ ವರ್ಷ ಅತೀ ವಿಜೃಂಭಣೆಯಿಂದ ನಡೆದಿದೆ. ಈ ಹಬ್ಬದಲ್ಲಿ ಭಕ್ತವೃಂದಕ್ಕೆ ಪ್ರಸಾದ ರೂಪದಲ್ಲಿ ಅಪ್ಪ ಹಾಗೂ ಕೋಳಿ ಪದಾರ್ಥವನ್ನು ಎಲ್ಲರಿಗೂ ಹಂಚಲಾಗುತ್ತದೆ. ಸಂತ ಜೋರ್ಜರ ಮುಂದೆ ಕೈ ಜೋಡಿಸಿ ಪರಿಪೂರ್ಣ ಭಕ್ತಿ ಹಾಗು ಅಚಲ ವಿಶ್ವಾಸದಿಂದ ಬೇಡಿದವರ ಉದ್ದಿಷ್ಠ ಕಾರ್ಯ ಸಫಲವಾಗುತ್ತದೆ. ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿದೆ ಎನ್ನುವದಕ್ಕೆ ವರ್ಷದಿಂದ ವರ್ಷಕ್ಕೆ ಇಲ್ಲಿಗಾಗಮಿಸುತ್ತಿರುವ ವೃಧಿಸುತ್ತಿರುವ ಭಕ್ತರ ಸಂಖ್ಯೆಯೇ ಸಾಕ್ಷಿ. ಇದು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ.
ಇಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಭಕ್ತರು ತಮ್ಮ ಇಷ್ಟಾರ್ಥ ಪೂರ್ತಿಯಾದ ನಿಮಿತ್ತ,ಉರುಳು ಸೇವೆಯನ್ನು ಅರ್ಪಿಸುತ್ತಿರುವುದು ವಿಶಿಷ್ಟ ಹಾಗೂ ಭಾವನಾತ್ಮಕ ಸಂಗತಿಯಾಗಿದೆ. ಈ ಚರ್ಚ್ ಹಬ್ಬದ ಪ್ರಮುಖ ಆಕರ್ಷಣೆಯಾದ ಉರುಳು ಸೇವೆ ಸ್ವ ಇಚ್ಛೆಯಿಂದ ನೆರವೇರಿಸುವ ಅತಿದೊಡ್ಡ ಹರಕೆ ಸೇವೆ ಆಗಿದೆ. ಸುಮಾರು 16 ವರ್ಷಗಳ ಹಿಂದೆಯವರೆಗೂ ಚರ್ಚ್ ಸುತ್ತಲೂ ಸೇವೆ ನಡೆಯುತ್ತಿದ್ದು, ಭಕ್ತರ ಸಂಖ್ಯೆಯು ಗಣನೀಯವಾಗಿ ಹೆಚ್ಚಿದ ಹಿನ್ನಲೆಯಲ್ಲಿ ಇದೀಗ ಚರ್ಚ್ ಎದುರು ನಿಗದಿತ ಸ್ಥಳದಲ್ಲಿ ಈ ಸೇವೆ ನಡೆಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 5ಸಾವಿರಕ್ಕೂ ಅಧಿಕ ಭಕ್ತರು ಧರ್ಮ, ಜಾತಿ ಮೀರಿದ ಭಾವನೆಗಳಿಂದ ಈ ಸೇವೆಯಲ್ಲಿ ಭಾಗವಹಿಸುತ್ತಾರೆ.
ಜಾತ್ರೆ ಸಂದರ್ಭದಲ್ಲಿ ಉರುಳುಸೇವೆ ಮಾಡುತ್ತಿರುವುದು (KADABA TIMES)
ಸ್ವ ಇಚ್ಛೆಯಿಂದ ನಡೆಯುವ ವಿಶಿಷ್ಟ ಸೇವೆ: ಇಲ್ಲಿ ವಿವಿಧ ತೆರನಾದ ಕಾಣಿಕೆಗಳನ್ನು ಸಲ್ಲಿಸುವುದು, ಶಿಲುಭೆ ಹಿಡಿದು ಮೆರವಣಿಗೆ ಹೋಗುವುದು, ಉರುಳು ಸೇವೆ, ಮೊಣಕಾಲ ಮೇಲೆ ನಡೆಯುವುದು, ಮೇಣದ ಬತ್ತಿ ಉರಿಸುವುದು, ಕೋಳಿ ಹಾಗೂ ಅಪ್ಪವನ್ನು ಹರಕೆಯಾಗಿ ತರುವುದು, ಮಕ್ಕಳನ್ನು ದೇವರ ಮುಂದೆ ಸಮರ್ಪಿಸಿ ಪ್ರಾರ್ಥಿಸುವುದು, ವಿವಿಧ ತೆರನಾದ ಆರೋಗ್ಯದ ಸಮಸ್ಯೆಗಳಿಂದ ಕಾಡುತ್ತಿರುವ ಮಕ್ಕಳನ್ನು ಸಂತ ಜೋರ್ಜರ ಮಧ್ಯಸ್ಥಿಕೆಯಿಂದ ಸಮರ್ಪಿಸಿ ಪ್ರಾರ್ಥಿಸುವುದು, ದೇವಾಲಯದ ಆರಾಧನೆಗಾಗಿ ಬೇಕಾದ ವಸ್ತುಗಳನ್ನು ನೀಡುವುದು, ದಿವ್ಯ ಬಲಿ ಪೂಜೆಗೆ ಹಾಗು ಇತರ ಪ್ರಾರ್ಥನೆಗಳಿಗೆ ಪ್ರಾರ್ಥನೆಗಾಗಿ ಹೆಸರನ್ನು ನೀಡುವುದು, ವಿವಿದ ತೆರನಾದ ಸಮಸ್ಯೆಗಳಿಗೆ ತದರೂಪವನ್ನು ನೀಡಿ ಪ್ರಾರ್ಥಿಸುವದು ಮುಂತಾದ ರೀತಿಯ ಹರಕೆಗಳನ್ನು ಪ್ರಧಾನವಾಗಿ ಇಲ್ಲಿ ನಡೆಯುತ್ತದೆ.
ಇದರಲ್ಲೂ ಸ್ವ ಇಚ್ಛೆಯಿಂದ ಅತ್ಯಂತ ಕಷ್ಟಕರವಾದ ಉರುಳು ಸೇವೆಯು ಅತ್ಯಂತ ಪ್ರಮುಖವಾದ ಸೇವೆಯು ಈ ಚರ್ಚ್ ನಲ್ಲಿ ನಡೆಯುತ್ತದೆ. ಕರ್ನಾಟಕ ಹಾಗೂ ಹೊರ ರಾಜ್ಯಗಳಿಂದಲೂ ಉರುಳು ಸೇವೆಯನ್ನು ಸಲ್ಲಿಸಲು ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಂದರ್ಭ ಎರಡೂ ಅವಧಿಗಳಲ್ಲಿ ಹಬ್ಬ ಮುಕ್ತಾಯದವರೆಗೆ ಸುಮಾರು 5 ಸಾವಿರಕ್ಕಿಂತ ಅಧಿಕ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಜನರು ತಮ್ಮ ಇಷ್ಟಾರ್ಥಸಿದ್ಧಿ ಈಡೇರಿದ ಫಲವಾಗಿ ಉರುಳು ಸೇವೆಯನ್ನು ಅರ್ಪಿಸುವುದು ಇಲ್ಲಿ ಅತ್ಯಂತ ವಿಶಿಷ್ಟವಾಗಿದೆ.