ಕಡಬ: ಜೀವವೈವಿಧ್ಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ ಹಿರಿಯ ವಿಜ್ಞಾನಿ ಡಾ. ಸೂರ್ಯಪ್ರಕಾಶ್ ಶೆಣೈ ಇನ್ನಿಲ್ಲ

Kadaba Times News

 ಕಡಬ ಟೈಮ್ಸ್, ಪ್ರಮುಖ ಸುದ್ದಿ:  ಡಾ. ಶಿವರಾಮ ಕಾರಂತ ನಿಸರ್ಗಧಾಮದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರಧಾನ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಸೂರ್ಯಪ್ರಕಾಶ್ ಶೆಣೈ ಅವರು ಮೇ.11 ರ ಬೆಳಿಗ್ಗೆ ಕಡಬದ ಹೊಸ್ಮಠದಲ್ಲಿ ತಮ್ಮ ಸ್ವಗೃಹದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ  ನಿಧನರಾಗಿದ್ದಾರೆ.



ಪಶ್ಚಿಮ ಘಟ್ಟದ ಸಸ್ಯಸಂಪತ್ತಿಗೆ ಜೀವ ನೀಡುವಂತೆ, ಪಿಲಿಕುಳದ 85 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ‘ಸಸ್ಯಕಾಶಿ’ ಎಂಬ ಸಸ್ಯೋದ್ಯಾನ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಿಗೆ ಭೇಟಿನೀಡಿ, ಬೀಜ ಸಂಗ್ರಹಿಸಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗೆ ಅಪಾರ ಕೊಡುಗೆ ನೀಡಿದ್ದರು.


ಅವರು ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಸಸ್ಯಶಾಸ್ತ್ರ ವಿಭಾಗದ ಮೊದಲ ಎಂ.ಎಸ್ಸಿ. (1988–90) ಬ್ಯಾಚ್ ನ ವಿದ್ಯಾರ್ಥಿಯಾಗಿದ್ದು, ನಂತರ ಅದೇ ವಿಭಾಗದಿಂದ ಎಂ.ಫಿಲ್ ಹಾಗೂ ಪಿ.ಎಚ್.ಡಿ ಪದವಿಗಳನ್ನು ಗಳಿಸಿದರು. ತಮ್ಮ ಶೋಧನೆಗಳ ಮೂಲಕ ಅನೇಕ ನಶಿಸಿಹೋಗುತ್ತಿರುವ ಹಾಗೂ ಅಪರೂಪದ ಸ್ಥಳೀಯ ಪ್ರಬೇಧದ ಸಸ್ಯಗಳನ್ನು ಪುನಶ್ಚೇತನಗೊಳಿಸಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳಲ್ಲಿ ಅನೇಕ ವೈಜ್ಞಾನಿಕ ಲೇಖನಗಳನ್ನು ಪ್ರಕಟಿಸಿದರು.


2000ರಲ್ಲಿ INEP ಪ್ರಾಯೋಜಿತ ಸಸ್ಯಕಾಶಿಯ ಸ್ಥಾಪನೆಯಿಂದ ಆರಂಭವಾಗಿ, 2011ರಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಸಹಾಯದಿಂದ ಪಿಲಿಕುಳದ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸ್ಥಾಪನೆಗೊಳ್ಳುವವರೆಗೆ ಅವರ ವೃತ್ತಿಪರ ಕಾರ್ಯಕ್ಷೇತ್ರ ಶ್ರೀಮಂತವಾಗಿತ್ತು. ಅವರು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕೇವಲ ಸಂಶೋಧಕನಾಗಿ ಮಾತ್ರವಲ್ಲ, ಮಾರ್ಗದರ್ಶಕನಾಗಿ ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ದೀಪವಾಗಿದ್ದರು.


ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಆಯುರ್ವೇದ ವಿದ್ಯಾರ್ಥಿಗಳಿಗಾಗಿ ಪರಿಸರ ಮತ್ತು ಸಸ್ಯಸಂರಕ್ಷಣೆಯ ಕುರಿತು ಹಲವು ತರಬೇತಿ ಶಿಬಿರಗಳನ್ನು, ಕಾರ್ಯಾಗಾರಗಳನ್ನು ಅವರು ನಡೆಸಿಕೊಟ್ಟಿದ್ದಾರೆ.

ಈ ರೀತಿಯ ವೈಜ್ಞಾನಿಕತೆಯೊಂದಿಗೆ ಮಾನವೀಯತೆಯನ್ನೂ ಹೊಂದಿದ್ದ ಡಾ. ಸೂರ್ಯಪ್ರಕಾಶ್ ಶೆಣೈ ಅವರ ಅಗಲಿಕೆ ಹಲವರು ಸಂತಾಪ ಸೂಚಿಸಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top