




ಕಡಬ ಟೈಮ್ಸ್(KADABA TIMES):ಕಡಬ: ಕೊಯಿಲದಲ್ಲಿ ಪಶು ವೈದ್ಯ ಕಾಲೇಜಿಗೆ ಅನುದಾನ ಬಿಡುಗಡೆಗೊಳಿಸಿದ್ದು ಕಾಂಗ್ರೆಸ್ ಸರಕಾರ ಹೊರತು ಬಿಜೆಪಿ ಸರಕಾರ ಅಲ್ಲ, ಕೊಯಿಲ ಎಂಬ ಊರು ಗೊತ್ತಿಲ್ಲದ ಪಶು ಸಂಗೋಪನಾ ಸಚಿವರು ಸತ್ಯವನ್ನು ಮರೆಮಾಚಿ ಹೇಳಿಕೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದ್ದಾರೆ.
ಅವರು ಜು.1ರಂದು ಕಡಬದ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯರು ಮುಖ್ಯ ಮಂತ್ರಿಯಾಗಿದ್ದಾಗ ಪಶುಸಂಗೋಪನಾ ಮಂತ್ರಿ ಜಯಚಂದ್ರರವರು ಮಂಜೂರಾತಿ ಮಾಡಿದ್ದು ಶೀರಾಕ್ಕೆ ಹೋಗುವ ಬದಲು ಅಂದಿನ ಉಸ್ತುವಾರಿ ಮಂತ್ರಿಯಾಗಿದ್ದ ನಾನು ಕೊಯಿಲದಲ್ಲಿ ಆಗುವಂತೆ ಮಾಡಿ ರೂ.140 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಶಂಕು ಸ್ಥಾಪನೆ ನೆರವೇರಿಸಿದ್ದೇವೆ.
ಇದು ಕಾಂಗ್ರೆಸ್ ಸರಕಾರದ ಕೊನೆಯ ಅವಧಿಯಲ್ಲಿ ಆಗಿತ್ತು. ಬಳಿಕ ಬಂದ ಬಿಜೆಪಿ ಸರಕಾರಕ್ಕೆ ಈ ಕೆಲಸವನ್ನು ಮಾಡಲು ಇಷ್ಟು ಸಮಯ ಬೇಕಾಗಿತ್ತು, ಅಲ್ಲದೆ ನಾವು ಮಾಡಿದ ಕೆಲಸವನ್ನು ಬಿಜೆಪಿ ಸರಕಾರದವರು ಮಾಡಿದ್ದು ಎಂದು ಹೇಳಿಕೆ ಬೇರೆ ಕೊಟ್ಟಿದ್ದಾರೆ, ಈ ಬಿಜೆಪಿಯವರಿಗೆ ನಾಚಿಕೆ ಆಗಬೇಕು ಎಂದರಲ್ಲದೆ ಕೊಯಿಲದ ಪಶುವೈದ್ಯ ಕಾಲೇಜಿಗೆ ಯಾರು ಅನುದಾನ ಬಿಡುಗಡೆಗೊಳಿಸಿದ್ದು ಎಂದು ಅಧಿಕಾರಿಗಳಲ್ಲಿ, ಇಂಜಿನಿಯರ್ ಗಳಲ್ಲಿ ಕೇಳಿದರೆ ಗೊತ್ತಾಗುತ್ತದೆ ಎಂದು ಹೇಳಿದರು.

ಕಡಬ ತಾಲೂಕು, ಸೇತುವೆಗಳ ನಿರ್ಮಾಣ ಮಾಡಿದ್ದು ಕಾಂಗ್ರೆಸ್: ನಾನು ಮಾಡಿಸಿದ ಕೆಲಸವನ್ನು ನಾನು ಯಾವತ್ತೂ ಧೈರ್ಯವಾಗಿ ಹೇಳಬಲ್ಲೆ ಎಂದ ರಮಾನಾಥ ರೈ, ಕಡಬ ತಾಲೂಕು, ಮಿನಿ ವಿಧಾನಸೌಧ, ಶಾಂತಿಮೊಗರು ಸೇತುವೆ, ಇಚ್ಲಂಪಾಡಿ ಸೇತುವೆ ಸೇರಿದಂತೆ ಹಲವಾರು ಕೆಲಸಗಳನ್ನು ಕಾಂಗ್ರೆಸ್ ಸರಕಾರ ಮಾಡಿದ್ದರೂ ಅದನ್ನೆಲ್ಲ ಇಂದು ಬಿಜೆಪಿಯವರು ನಾವು ಮಾಡಿದ್ದು ಎಂದು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ, ಸದಾ ಜನರನ್ನು ಶೋಷಿಸುತ್ತಿರುವ ಬಿಜೆಪಿ ಸರಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಽರ್ ಕುಮಾರ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ಡಾ| ರಘು, ನಂದಕುಮಾರ್, ಕೃಷ್ಣಪ್ಪ, ಕಡಬ ಬ್ಲಾಕ್ ಪದಾಧಿಕಾರಿಗಳು ಹಾಜರಿದ್ದರು.