




ಕಡಬ ಟೈಮ್ಸ್(KADABA TIMES):ಸಾಕಷ್ಟು ಪರ-ವಿರೋಧದ ನಡುವೆಯೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಿರುವ ಸರ್ಕಾರ, ವಿದ್ಯಾರ್ಥಿಗಳ ಪೋಷಕರ ಲಿಖಿತ ಒಪ್ಪಿಗೆ ಪಡೆದುಕೊಂಡೇ ಮೊಟ್ಟೆ ವಿತರಿಸಲು ಮುಂದಾಗಿದೆ.
ಸರ್ಕಾರದ ಈ ನಿರ್ಧಾರದಿಂದ ಹೊಸದಾಗಿ ಕಾರ್ಯಕ್ರಮ ಜಾರಿಯಾಗುತ್ತಿರುವ ರಾಜ್ಯದ 23 ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ಮೂಲಕ ಪಾಲಕರ ಒಪ್ಪಿಗೆ ಪತ್ರಕ್ಕೆ ಸಹಿ ಸಂಗ್ರಹಿಸುವ ಕಾರ್ಯ ನಡೆದಿದೆ. ಎಲ್ಲ ಶಾಲೆಗಳಲ್ಲಿ ಶಾಲಾ ಮುಖ್ಯಸ್ಥರು ಈ ಕುರಿತು ಪಾಲಕರ ಒಪ್ಪಿಗೆ ಪತ್ರದ ಮಾದರಿ ತಯಾರಿಸಿ ಅದಕ್ಕೆ ಪಾಲಕರಿಂದ ಒಪ್ಪಿಗೆಯ ಸಹಿ ಸಂಗ್ರಹಿಸಲು ಮುಂದಾಗಿದ್ದಾರೆ.

ಶಾಲೆಯಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮಗುವಿಗೆ ವಿತರಿಸಲಾಗುತ್ತದೆ. ಇದರಲ್ಲಿ ನಿಮ್ಮ ಮಗುವಿಗೆ (ಒಂದೇ ಆಯ್ಕೆ ಮಾಡಬೇಕು) ಯಾವುದನ್ನು ನೀಡಲು ನಿಮ್ಮ ಅನುಮತಿ ಇದೆ ಎಂಬುದನ್ನು ಸೂಚಿಸಿ ಸಹಿಯೊಂದಿಗೆ ಪತ್ರ ಕಳುಹಿಸಿ ಕೊಡಬೇಕು ಎಂದು ಪ್ರತಿ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳ ಪಾಲಕರಿಗೆ ಸೂಚಿಸಲಾಗುತ್ತಿದೆ.
ಈ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಂಡೇ ಆಹಾರ ವಿತರಣೆಗೆ ಕ್ರಮ ವಹಿಸಲಾಗುತ್ತಿದೆ. ಇದರಿಂದಾಗಿ ಪಾಲಕರು ತಮ್ಮ ಮಗುವಿಗೆ ಯಾವ ಆಹಾರ ನೀಡಬಹುದು ಎಂದು ಲಿಖೀತವಾಗಿಯೇ ಒಪ್ಪಿಗೆ ಸೂಚಿಸಬೇಕಾಗಿದೆ.