




ಕಡಬ ಟೈಮ್ಸ್(KADABA TIMES):ಉಪ್ಪಿನಂಗಡಿ: ಎಡೆಬಿಡದೆ ಮಳೆ ಸುರಿಯುತ್ತಿರುವ ಮಳೆಗೆ ಕುಮಾರಧಾರ- ನೇತ್ರಾವತಿ ನದಿಗಳು ಮೈದುಂಬಿ ಹರಿಯುತ್ತಿದ್ದು ನೆರೆ ಭೀತಿಯನ್ನು ಹುಟ್ಟು ಹಾಕಿವೆ.
ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸ್ನಾನಘಟ್ಟದ ಬಳಿ ನೇತ್ರಾವತಿ ನದಿಗಿಳಿಯುವ 38 ಮೆಟ್ಟಿಲುಗಳಲ್ಲಿ ಸಂಜೆಯಾಗುತ್ತಲೇ ಆರೂವರೆ ಮೆಟ್ಟಿಲುಗಳಷ್ಟೇ ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳೆಲ್ಲಾ ಮುಳುಗಿವೆ.

ಶಂಭೂರು ಅಣೆಕಟ್ಟು ಆಧಾರಿತ ಜಲಮಾಪಕದಲ್ಲಿ 29.0 ಮೀ. ನೀರಿನ ಪ್ರಮಾಣ ದಾಖಲಾಗಿದ್ದು, ಇದರ ಅಪಾಯದ ಮಟ್ಟ 30 ಮೀ. ಆಗಿದೆ.
ಪುತ್ತೂರು ತಹಶೀಲ್ದಾರ್ ನಿಸರ್ಗ ಪ್ರಿಯ ಅವರು ಉಪ್ಪಿನಂಗಡಿಗೆ ಆಗಮಿಸಿ, ನದಿ ನೀರಿನ ಪರಿಶೀಲನೆ ನಡೆಸಿದರಲ್ಲದೆ, ಗೃಹ ರಕ್ಷಕರನ್ನೊಳಗೊಂಡ ಪ್ರಾಕೃತಿಕ ವಿಕೋಪ ತಂಡದ ರಬ್ಬರ್ ಬೋಟ್ ನಲ್ಲಿ ಸಂಚರಿಸಿ, ಬೋಟ್‌ನ ಕಾರ್ಯಕ್ಷಮತೆ ಪರಿಶೀಲನೆ ನಡೆಸಿದರು.