




ಕಡಬ ಟೈಮ್ಸ್(KADABA TIMES):ಸುಳ್ಯ: ವ್ಯಕ್ತಿಯೊಬ್ಬರು ತನ್ನ ಕುಟುಂಬದ ಜೊತೆ ಕಾರಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿ ಕಣ್ಣಿಗೆ ತೀವ್ರ ಸ್ವರೂಪದ ಗಾಯ ಮಾಡಿದ ಆರೋಪಿಗಳಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2018 ಜುಲೈ 15ರಂದು ಸುಳ್ಯ ತಾಲೂಕಿನ ಕಂದಡ್ಕ ನಿವಾಸಿ ವಿಜಯ ಕುಮಾರ್ ಎಂಬವರು ತನ್ನ ಕುಟುಂಬದ ಜೊತೆ ತನ್ನ ಕಾರಿನಲ್ಲಿ ಪುತ್ತೂರಿಗೆ ಬಂದು ಮನೆಗೆ ವಾಪಸ್ ಹೋಗುತ್ತಿರುವ ಸಮಯ ಆರೋಪಿಗಳಾದ ಕಂದಡ್ಕ ಸಿ ಆರ್ ಸಿ ಕಾಲನಿ ನಿವಾಸಿಗಳಾದ ಶಶಿಕುಮಾರ್ ಮತ್ತು ಸತ್ಯರಾಜ್ ಎಂಬವರು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ವಿಜಯ ಕುಮಾರ್ ಅವರ ಕಣ್ಣಿಗೆ ಕಿಬಂಚ್ ನಿಂದ ಹಲ್ಲೆ ನಡೆಸಿ ತೀವ್ರ ಸ್ವರೂಪದ ಗಾಯ ಮಾಡಿದ್ದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸುದ್ದಿಯನ್ನೂ ಓದಿರಿ:ಅಕ್ರಮ ಮರಳು ಸಾಗಾಟದ ಆರೋಪಿಗಳನ್ನು ದೋಷ ಮುಕ್ತಗೊಳಿಸಿದ ಸುಳ್ಯ ಕೋರ್ಟ್

ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಸುಳ್ಯ ಠಾಣಾ ಉಪನಿರೀಕ್ಷಕ ಮಂಜುನಾಥ್ ಪ್ರಕರಣ ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 341, 504, 326, 506 ಸಹವಾಚಕ 34 ರಡಿಯಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ ಅವರು ಆರೋಪಿಗಳು ಎಸಗಿದ ಆರೋಪ ಸಾಬೀತಾಗಿದೆ ಎಂದು ಹೇಳಿ ಆರೋಪಿಗಳಿಗೆ 2 ವರ್ಷ 6 ತಿಂಗಳು ಜೈಲು ವಾಸ ಅನುಭವಿಸುವಂತೆ ಹಾಗೂ ತಲಾ 12000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ದಂಡ ಪಾವತಿಸಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಜೈಲು ವಾಸ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಬಿ. ವಾದಿಸಿದ್ದರು.