




ಕಡಬ ಟೈಮ್ಸ್(KADABA TIMES):ಬೆಳ್ಳಾರೆ: ಕೊಡಿಯಾಲ ಗ್ರಾಮದ ಪೊಟ್ರೆಯಿಂದ ಕಾಣಿಯೂರು ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ರಸ್ತೆ ಕುಸಿತದ ಭೀತಿ ಎದುರಾಗಿದೆ.
ಕಳೆದ ತಿಂಗಳು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರೋರ್ವರು ಮನವಿ ನೀಡಿದ ವೇಳೆ ಅಧಿಕಾರಿಗಳಿಗೆ ಸ್ಥಳ ಭೇಟಿಗೆ ತಿಳಿಸಿದ್ದರು. ಆದರೆ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಕೊಡಿಯಾಲದ ಸಂತೋಷ್ ಎಂಬವರು ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. ಅಹವಾಲನ್ನು ಸ್ವೀಕರಿಸಿದ ಜಿಲ್ಲಾಧಿಕಾಗಳು ಅಧಿಕಾರಿಗಳ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ.

ಬಳಿಕ ತಾ.ಪಂ. ಇ.ಒ. ರನ್ನು ಪ್ರಶ್ನಿಸಿದಾಗ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು. ಆಗ ಜಿಲ್ಲಾಧಿಕಾರಿಗಳು ಎಸ್ಟಿಮೇಟ್ ಮಾಡಿ ನನಗೆ ಕಳುಹಿಸಿ ನಾನೇ ಅದನ್ನು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕಳುಹಿಸುತ್ತೇನೆ. ಈಗ ತಾತ್ಕಾಲಿಕವಾಗಿ ರಸ್ತೆ ಇನ್ನೂ ಕುಸಿಯದಂತೆ ಮರಳಿನ ಚೀಲ ಇಟ್ಟು ವ್ಯವಸ್ಥೆ ಮಾಡಿ. ಇನ್ನೆರಡು ದಿನದಲ್ಲಿ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಅನಿತಾ ಲಕ್ಷ್ಮೀಯವರಿಗೂ ಈ ಕುರಿತು ಗಮನ ಹರಿಸುವಂತೆ ಸೂಚನೆ ನೀಡಿದರು.