




ಕಡಬ ಟೈಮ್ಸ್ (KADABA TIMES)ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡಿರುವ ಶಾಸಕ ಎಸ್. ಅಂಗಾರ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಸೋಮವಾರ ದೇಗುಲದಲ್ಲಿ ಅಧಿಕಾರ ಸ್ವೀಕರಿಸಿದರು.
ದೇವಸ್ಥಾನದ ಕಛೇರಿಗೆ ಆಗಮಿಸಿದ ಅಭಿವೃದ್ಧಿ ಸಮಿತಿಯ ಸದಸ್ಯರು ದೇವಸ್ಥಾನಕ್ಕೆ ಭೇಟಿ ಇತ್ತು ದೇವರ ದರ್ಶನ ಪಡೆದರು. ಬಳಿಕ ಶ್ರೀ ನರಸಿಂಹ ದೇವರ ದರ್ಶನ ಪಡೆದು, ಹೊಸಗುಳಿಗಮ್ಮನ ದರ್ಶನ ಪಡೆದರು. ಬಳಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಅಂಗಾರ ಅಧಿಕಾರ ಅವರಿಗೆ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಶಾಲು ಹೊದಿಸಿ ಗೌರವಿಸಿದರು. ಬಳಿಕ ಕಡತಕ್ಕೆ ಸಹಿ ಹಾಕಿಸುವ ಮುಖಾಂತರ ಅಧಿಕಾರ ಸ್ವೀಕರಿಸಿ ಮಾತನಾಡಿ ಆಡಳಿತ ಪಕ್ಷ ಕೆಲಸ ಮಾಡಲು ಹಲವು ಅವಕಾಶಗಳನ್ನು ನೀಡುತ್ತಾ ಬಂದಿದೆ.ಆಡಳಿತಾವಧಿಯಲ್ಲಿ ಅಧಿಕಾರಕ್ಕಿಂತಲೂ ಅಭಿವೃದ್ದಿ ಚಟುವಟಿಕೆ ಮುಖ್ಯವಾಗಿದೆ. ಪ್ರಾಮಾಣಿಕ ಕೆಲಸಗಳು ನಮ್ಮನೂ ಎತ್ತರದ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದರು.

ಸಮಿತಿ ಸದಸ್ಯರುಗಳಾದ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್ ಪ್ರಸಾದ್, ಟಿ. ವನಜಾ ವಿ ಭಟ್, ಮನೋಹರ ರೈ , ಪ್ರಸನ್ನ ದರ್ಬೆ ಕಡತಕ್ಕೆ ಸಹಿ ಹಾಕಿ ಜವಾಬ್ದಾರಿ ವಹಿಸಿಕೊಂಡರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಸುಬ್ರಹ್ಮಣ್ಯ ಗ್ರಾಮ ಬಿಜೆಪಿಯ ಅಧ್ಯಕ್ಷ ದಿನೇಶ್ ಸಂಪ್ಯಾಡಿ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.