




ಕಡಬ ಟೈಮ್ಸ್ (KADABA TIMES):ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯೂ ರಕ್ತದಾನ ಮಾಡಲು ಮುಂದಾಗಬೇಕು. ಈ ಮೂಲಕ ಸಮಾಜದಲ್ಲಿ ರಕ್ತದಾನದ ಅರಿವು ಹೆಚ್ಚಾಗಬೇಕು ಎಂದು ಹೊಟೇಲ್ ಉದ್ಯಮಿ ಮತ್ತುಕುಮಾರ್ ಹೇಳಿದರು.
ಅವರು ಕಡಬ ಪ್ರಖಂಡ ವಿಹಿಂಪ ಮತ್ತು ಬಜರಂಗದಳದ ವತಿಯಿಂದ ಮಂಗಳೂರಿನ ಎ.ಜೆ. ಆಸ್ಪತ್ರೆ ಬ್ಲಡ್ ಬ್ಯಾಂಕ್ ಹಾಗೂ ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಸೋಮವಾರ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಕ್ತದಾನದ ಮಹತ್ವದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಒತ್ತು ನೀಡಬೇಕು ಎಂದರು.

ಎ.ಜೆ. ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಗುಣಮಟ್ಟ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಪಿ.ಆರ್. ಗೋಪಾಲಕೃಷ್ಣ ಅವರು ಮಾತನಾಡಿ ರಕ್ತದಾನದ ಮಹತ್ವ ಹಾಗೂ ಅದರಿಂದ ನಮ್ಮ ಆರೋಗ್ಯದ ಮೇಲೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉಮೇಶ್ ಗೌಡ ಮರ್ದಾಳ ಅವರು ದೀಪ ಬೆಳಗಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್, ಕಡಬ ಪ್ರಖಂಡ ಮಾತೃಶಕ್ತಿಯ ಪ್ರಮುಖ್ ಗೀತಾ ಅಮೈ ಕೇವಳ ಅತಿಥಿಗಳಾಗಿ ಆಗಮಿಸಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ, ವಿಹಿಂಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ ಸೇರಿದಂತೆ ಪ್ರಮುಖರು ಹಾಜರಿದ್ದರು. ವಿಹಿಂಪ ಕಡಬ ಪ್ರಖಂಡದ ಅಧ್ಯಕ್ಷ ರಾಧಕೃಷ್ಣ ಕೋಲ್ಪೆ ,, ಗೋರಕ್ಷ ಪ್ರಮುಖ್ ಉಮೇಶ್ ಶೆಟ್ಟಿ ಸಾಯಿರಾಂ ,, ಬಜರಂಗದಳ ಕಡಬ ಪ್ರಖಂಡ ಸಂಚಾಲಕ ಮೂಲಚಂದ್ರ ಕಾಂಚನ ಕಾರ್ಯಕ್ರಮ ನಿರ್ವಹಿಸಿದರು. ಶಿಬಿರದಲ್ಲಿ ಸುಮಾರು ೭೦ ಮಂದಿ ರಕ್ತದಾನ ಮಾಡಿದರು.