




ಕಡಬ ಟೈಮ್ಸ್ (KADABA TIMES):ಲಂಚ ತೆಗೆದು ಕೊಳ್ಳುವುದು ಮಾತ್ರ ಭ್ರಷ್ಟಾಚಾರವಲ್ಲ.ಅಧಿಕಾರಿಗಳು ಸಮಯ ಪಾಲನೆ ಮಾಡದೇ ಇರುವುದು,ಸರಕಾರಿ ಕೆಲಸದ ಬಗ್ಗೆ ಗೌರವ ಇಲ್ಲದೆ, ಅಹಂಕಾರ, ದರ್ಪದಿಂದ ವರ್ತಿಸುವುದು, ಮಾಹಿತಿ ಕೇಳುವ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೇ ಇರುವುದು ಕೂಡಾ ಭ್ರಷ್ಟಾಚಾರವೇ ಆಗಿದೆ ಎಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ವಿಜಯಪ್ರಸಾದ್ ಅವರು ಹೇಳಿದರು.
ಅವರು ಕಡಬದಲ್ಲಿ ತ ನಡೆದ ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಕಾರ್ಯಕ್ರಮ “ಜಾಗೃತ ಭಾರತ-ಸಮೃದ್ಧ ಭಾರತ” ಶೀರ್ಷಿಕೆಯಡಿ ನಡೆದ ಜಾಗೃತಿ ಅರಿವು ಮತ್ತು ಪ್ರತಿಜ್ಞಾವಿಧಿ ಸಪ್ತಾಹದಲ್ಲಿ ಮಾತನಾಡಿದರು.
ಭ್ರಷ್ಟಾಚಾರ ಎಂದರೆ ಬರೇ ಲಂಚ ತೆಗೆದುಕೊಳ್ಳುವುದು ಮಾತ್ರವಲ್ಲ,ಬದಲಾಗಿ ಕಚೇರಿಗೆ ಬರುವ ಅಧಿಕಾರಿಗಳು ಅವರ ಉಡುಗೆತೊಡುಗೆ,ವರ್ತನೆ, ಕಚೇರಿ ವಿನ್ಯಾಸ, ಕಡತ ಜೋಡಣೆಯಲ್ಲೂ ತಮ್ಮದೇ ಆದ ಶಿಸ್ತನ್ನು ಪಾಲಿಸಬೇಕು. ಕಚೇರಿಯಲ್ಲಿನ ಸಂಪ್ರದಾಯ ಮತ್ತು ಸಭ್ಯತೆಯನ್ನು ಆದಷ್ಟು ಪಾಲನೆ ಮಾಡಬೇಕು. ತಮಗೆ ತಮ್ಮ ಇಲಾಖೆಗಳ ಮಾಹಿತಿ ಇಲ್ಲ ಎಂದ ಮೇಲೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ. ಆಗ ಅದು ಇನ್ನೊಂದು ಸಮಸ್ಯೆಗೆ ಎಡೆ ಮಾಡಿಕೊಡುತ್ತದೆ.

ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ, ಎಷ್ಟೋ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳ ಮಾತಿಗೆ ಕೆಲಸ ಮಾಡುವಾಗ ಅವರಿಗೆ ಗೌರವ ಕೊಟ್ಟು ಕಾನೂನು ಮೀರಿದ ಕೆಲಸವಿದ್ದರೆ ಅವರಿಗೆ ಸರಿಯಾದ ಮಾಹಿತಿ ನೀಡಿ. ಅದೂ ಸಾಧ್ಯವಾಗದಿದ್ದಾಗ ಮೇಲಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಸೂಚನೆಯನ್ನು ನೀಡಿ ಮಾಹಿತಿ ಪಡೆದು ಕೊಳ್ಳಿ ಎಂದು ಹೇಳಿದರು.
ಸಭೆಯ ಕೊನೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ಪ್ರತಿಜ್ಞಾ ವಿಧಿಯನ್ನು ಲೋಕಾಯುಕ್ತ ಪೊಲೀಸ್ ಉಪ ಅಧೀಕ್ಷಕ ವಿಜಯಪ್ರಸಾದ್ ಬೋಧಿಸಿದರು.ಅಧಿಕಾರಿಗಳು ತಾವುಗಳು ಭೃಷ್ಟಾಚಾರಕ್ಕೆ ಆಸ್ಪದ ನೀಡುವುದಿಲ್ಲ ಮತ್ತು ಲಂಚ ತೆಗೆದುಕೊಳ್ಳುವುದಿಲ್ಲ ಎಂಬುದಾಗಿ ಪ್ರತಿಜ್ಞೆ ಮಾಡಿದರು.
ಸಭೆಯಲ್ಲಿ ಪಟ್ಟಣ ಪಂಚಾಯತ್, ಕಂದಾಯ, ಅರಣ್ಯ,ಮೆಸ್ಕಾಂ, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.