




ಕಡಬ ಟೈಮ್ಸ್ ,ಪ್ರಮುಖ ಸುದ್ದಿ: ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಬೇಕೆಂದು ಆರು ವರ್ಷಕ್ಕಿಂತ ಹೆಚ್ಚು ಕಾಲೇಜು ಮುಖ್ಯಸ್ಥರು ಪ್ರಯತ್ನ ಪಟ್ಟರೂ ಸ್ಥಳೀಯ ಆಡಳಿತವಾಗಲಿ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಾಗಲಿ ಸರಿಯಾದ ರೀತಿಯಲ್ಲಿ ಸ್ಪಂದಿಸದೆ ಒಂದು ರೀತಿಯಲ್ಲಿ ಸರ್ಕಾರಿ ಶಾಲೆಯ ಬಗ್ಗೆ ಅಸಡ್ಡೆ ತೋರಿದ್ದರು. ಆದರೆ ಕಾಲೇಜಿನ ಉಪನ್ಯಾಸಕರಿಬ್ಬರು ತಮ್ಮ ಉಪನ್ಯಾಸದ ನಡುವೆಯೂ ಖಾಸಗಿ ಸಂಸ್ಥೆಯ ಅನುದಾನ ತರಿಸಲು ನಿರಂತರ ಶ್ರಮಿಸಿ ನಂತರ ಶೌಚಾಲಯ ನಿರ್ಮಿಸುವ ಜವಾಬ್ದಾರಿಯನ್ನೂ ಹೊತ್ತು ಉದ್ಘಾಟನೆಯ ಹಂತಕ್ಕೆ ಕೊಂಡೊಯ್ದು ಗಮನ ಸೆಳೆದಿದ್ದಾರೆ.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದ
ಪ್ರಸ್ತುತ ಹಿರಿಯ ಉಪನ್ಯಾಸಕರಾಗಿ ಮುಂದುವರೆಯುತ್ತಿರುವ ವಾಸುದೇವ ಗೌಡ ಕೋಲ್ಪೆ, ಮತ್ತು ಮತ್ತೋರ್ವ
ಉಪನ್ಯಾಸಕ ಸಲೀನ್ ಕೆ.ಪಿ ಶೌಚಾಲಯ ನಿರ್ಮಾಣದ ಹಿಂದಿರುವ ರುವಾರಿಗಳು . ಈ ಮೂಲಕ ಯಾವುದೇ ಗುತ್ತಿಗೆದಾರನಿಲ್ಲದೆ
ನಿರ್ಮಾಣವಾದ ಸುಸಜ್ಜಿತ ಶೌಚಾಲಯ ಇದಾಗಿದ್ದು ಇದರ ಎಲ್ಲಾ ಕ್ರೆಡಿಟ್ ಇವರಿಬ್ಬರಿಗೆ ಸಲ್ಲುತ್ತದೆ.
ಗ್ರಾಮೀಣ
ಭಾಗದ ದೂರದ ಊರಿಂದ ಸರ್ಕಾರಿ ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಯರಿಗೆ ವಿಶ್ರಾಂತಿ
ಪಡೆಯಲು ಮತ್ತು ನಿತ್ಯಕರ್ಮಕ್ಕಾಗಿ ಶೌಚಾಲಯಕ್ಕೆ ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ.
ಹಲವು ವಿದ್ಯಾರ್ಥಿನಿಯರು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಇದನ್ನು ಮನಗಂಡು ಉಪನ್ಯಾಸಕರಿಬ್ಬರು ಸಂಬಂಧಿಸಿದವರಿಗೆ ಹಲವು
ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಆಪ್ತರೊಬ್ಬರ ಮೂಲಕ ಎಂಆರ್‌ಪಿಎಲ್ ಸಂಸ್ಥೆಯನ್ನು
ಸಂಪರ್ಕಿಸಿದ್ದರು. ಕ್ಷೇತ್ರದ ಶಾಸಕಿಯೂ ಗ್ರೀನ್ ಸಿಗ್ನಲ್
ನೀಡಿ ಅನುದಾನ ಬಿಡುಗಡೆಗೆ ಸಮ್ಮತಿ ಸೂಚಿಸಿ ಮನವಿಗೆ ಸಹಿ ಹಾಕಿದ್ದರು. ಇದಕ್ಕೆ ಕಾಲೇಜಿನ ಇದರ ಸಹೊದ್ಯೋಗಿಗಳೂ ಬೆಂಬಲ ಸೂಚಿಸಿದ್ದರು. ಕೆಲ ಸಮಯದ
ಬಳಿಕ ಎಂಆರ್ ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯ 10 ಲಕ್ಷ ರೂ. ಅನುದಾನ ಬಿಡುಗಡೆಯಾಗುವ ಮೂಲಕ ಇವರ
ಕನಸಿಗೆ ಇನ್ನಷ್ಟು ಜಿವ ತುಂಬಿತ್ತು. ಈ ಎಲ್ಲಾ ಬೆಳವಣಿಗೆಯ
ನಡುವೆ ತಾಪಂನ 7 ಲಕ್ಷ ರೂ. ಅನುದಾನ ಒದಗಿ ಬಂದಿತ್ತು.
ಇದೀಗ ಜೂನ್17 ರಂದು ಸರಕಾರಿ ಪದವಿ
ಪೂರ್ವ ಕಾಲೇಜಿನಲ್ಲಿ ಎಂಆರ್ ಪಿಎಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯ 10 ಲಕ್ಷ ರೂ. ಹಾಗೂ ತಾಪಂನ 7 ಲಕ್ಷ
ರೂ. ಅನುದಾನದಲ್ಲಿ ನಿರ್ಮಿಸಿದ ಬಾಲಕಿಯರ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಏಕಕಾಲಕ್ಕೆ
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಅಲ್ಲದೆ
ಸುಂದರ ಶೌಚಾಲಯವನ್ನು ಕಂಡು ಬೆರಗಾಗಿದ್ದಾರೆ.
ವಿಶೇಷ ಕಾಳಜಿ ವಹಿಸಿ ಶೌಚಾಲಯ ನಿರ್ಮಾಣದ ಪ್ರತಿ ಹಂತದಲ್ಲೂ ಸೂಕ್ತ ಸಲಹೆ ಮಾರ್ಗದರ್ಶ ನೀಡಿರುವ ಎಂಆರ್‌ಪಿಎಲ್ ಮ್ಯಾನೇಜರ್ (ಅಪರೇಶನ್ಸ್) ಪ್ರದೀಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಸ ಹಂಚಿಕೊಂಡಿದ್ದಾರೆ. ಸಂಸ್ಥೆಯು ತನ್ನ ಲಾಭದ ಒಂದಂಶ ವನ್ನು ಆರೋಗ್ಯ, ಶಿಕ್ಷಣ ಸೇರಿದಂತೆ ಸಮಾಜಮುಖಿ ಕಾವ್ಯಗಳಿಗಾಗಿ ಸಿಎಸ್‌ಆರ್ ನಿಧಿಯ ಮೂಲಕ ಬಳಸುತ್ತಿದೆ. ಕಡಬ ಪ.ಪೂ. ಕಾಲೇಜಿನಲ್ಲಿ ನಮ್ಮ ಸಿಎಸ್‌ಆರ್ ನಿಧಿಯಲ್ಲಿ ಕೊಡಮಾಡಲಾದ ಅನು ದಾನದ ಕಾಮಗಾರಿಯು ಅತ್ಯುತ್ತಮ ಗುಣಮಟ್ಟದಲ್ಲಿರುವುದು ನಮಗೆ ಸಂತಸ ತಂದಿದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.ಕಾಲೇಜಿನ ಪ್ರಿನ್ಸಿಪಾಲ್ ಡಿ. ದೇವರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಜನ ಪ್ರತಿನಿಧಿಗಳು, ಸಾಮಾಜಿಕ ಮುಂದಾಳುಗಳು ,ಕಾಲೇಜಿನ ಉಪನ್ಯಾಸಕ ವೃಂದ, ಕಾಲೇಜಿನ ಹಿತೇಷಿಗಳು ಭಾಗವಹಿಸಿದ್ದರು.