ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ವಿದ್ಯಾನಗರ ಬಳಿ ಚರಂಡಿಗೆ ಬಿದ್ದ ತಡೆಗೋಡೆ :ರಸ್ತೆಯಲ್ಲೇ ಹರಿಯುತ್ತಿರುವ ಮಳೆನೀರು

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ: ವಿದ್ಯಾನಗರ ಬಳಿ ಚರಂಡಿಗೆ ಬಿದ್ದ ತಡೆಗೋಡೆ :ರಸ್ತೆಯಲ್ಲೇ ಹರಿಯುತ್ತಿರುವ ಮಳೆನೀರು

Kadaba Times News
0

 ಕಡಬ ಟೈಮ್ಸ್ (KADABA TIMES): ಕಡಬ ಜಂಕ್ಷನ್ ನಿಂದ ಕೋಡಿಂಬಾಳದವರೆಗೆ  ರಸ್ತೆಯು ಹೊಂಡಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಾ ತಮ್ಮ ವಾಹನ ಚಲಾಯಿಸುತ್ತಿದ್ದಾರೆ. ಈ ನಡುವೆ ಅಲ್ಲಲ್ಲಿ ಚರಂಡಿಗಳು ನಿರ್ವಹಣೆ ಇಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹರಿದು ಹೋಗುವ ದೃಶ್ಯಗಳು ಸಾಮಾನ್ಯ ಎಂಬಂತೆ ಆಗಿವೆ. 


ಕಡಬ-ಪಂಜ ರಸ್ತೆಯ  ವಿದ್ಯಾನಗರದ ಖಾಸಗಿ ಶಾಲೆ ಬಳಿ  ತಡೆಗೋಡೆಯೊಂದು ಮಗುಚಿ ಚರಂಡಿಗೆ ಬಿದ್ದಿದ್ದು ವರ್ಷವಾಗುತ್ತಾ ಬಂದರೂ ಅದರ ತೆರವು ಮಾಡಿಲ್ಲ.  ಹೀಗಾಗಿ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲಿಯೇ ಹರಿದು ಹೋಗುತ್ತಿದೆ. ಈ ರಸ್ತೆಯಲ್ಲಿ ಚರಂಡಿ ದುರಸ್ತಿ ಮಾಡುವಾಗಲೂ ಈ ತಡೆಗೋಡೆ ಬಿದ್ದಿರುವ  ಜಾಗವನ್ನು ಮುಟ್ಟಿಲ್ಲ.

 

ಚರಂಡಿಗೆ ಬಿದ್ದ ತಡೆಗೋಡೆಯನ್ನು ತೆರವುಗೊಳಿಸದಿರುವ ಮತ್ತು ಚರಂಡಿ ಮುಚ್ಚಿರುವ   ಬಗ್ಗೆ ಜಿಲ್ಲಾಧಿಕಾರಿಗೆ, ಲೋಕೋಪಯೋಗಿಯ ಪ್ರಧಾನ ಕಾರ್ಯದರ್ಶಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಇ ಮೇಲ್ ದೂರು ಸಲ್ಲಿಸಿದ್ದಾರೆ. 

 


ಮಾಹಿತಿಯ ಪ್ರಕಾರ  ಈ ತಡೆಗೋಡೆಯನ್ನು ಖಾಸಗಿ ಶಾಲೆಯವರು  ನಿರ್ಮಾಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಯಾವುದೇ ಸರ್ಕಾರಿ ಯೋಜನೆಯಿಂದ ಮಾಡಿರುವ ಕಾಮಗಾರಿಯಲ್ಲ ಎಂಬುದು ಅಧಿಕಾರಿಗಳು ಹೇಳುತ್ತಿರುವ ಉತ್ತರವಾಗಿದೆ.  ಸಮರ್ಪಕವಾಗಿ ಯೋಜನಾ ಬದ್ದವಾಗಿ ನಿರ್ಮಾಣ ಮಾಡದ ಕಾರಣ ಮಣ್ಣು ಜರಿಯುವುದರ ಜೊತೆಗೆ ತಡೆಗೋಡೆಯೂ ಬಿದ್ದು ಚರಂಡಿಯಲ್ಲಿ ವಾಲಿ ನಿಂತಿದೆ.ಈ ತಡೆಗೋಡೆ ಬಿದ್ದಿರುವ ಪಕ್ಕವೇ ರಸ್ತೆ ತಿರುವಿನಂತಿದ್ದು ಅಪಘಾತಕ್ಕೆ ಆಹ್ವಾನ ನೀಡುವಂತಿದೆ.



ಖಾಸಗಿಯಾಗಿ ನಿರ್ಮಾಣ ಮಾಡಿ ಇದೀಗ ಚರಂಡಿಗೆ ಬಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದರ ಬಗ್ಗೆ ಸ್ಥಳೀಯಾಡಳಿತ ಅಥವಾ ಸಂಬಂಧಿಸಿದ ಅಧಿಕಾರಿಗಳು ತಡೆಗೋಡೆ ನಿರ್ಮಾಣ ಮಾಡಿದವರಿಗೆ ಕನಿಷ್ಠ ಸೂಚನೆ ಅಥವಾ ಎಚ್ಚರಿಕೆಯನ್ನು ನೀಡದಿರುವುದು ಅಧಿಕಾರಿಗಳ ಬೆಜಾವ್ದಾರಿಯನ್ನು ಎತ್ತಿ ತೋರಿಸುವಂತಿದೆ. ಚರಂಡಿ ಮುಚ್ಚಿ ಹೋಗಿದ್ದರು ಕಡಬ ಪಟ್ಟಣ ಪಂಚಾಯತ್ ಅಧಿಕಾರಿಗಳು   ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆಂಬ ಆರೋಪ ಸಾರ್ವಜನಿಕರದ್ದಾಗಿದೆ.


ಈ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಲೀಲಾವತಿ ಅವರು ಕಡಬ ಟೈಮ್ಸ್ ಗೆ ಪ್ರತಿಕ್ರಿಯಿಸಿ  ತಡೆಗೋಡೆ ಕುಸಿತವಾಗಿರುವ ಜಾಗಕ್ಕೆ ತೆರಳಿ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.  ಸುಳ್ಯ  ಲೋಕೋಪಯೋಗಿ ವಿಭಾಗದ ಎಇಇ ಗೋಪಾಲ್  ಅವರು ಮಾತನಾಡಿ ಇದು ಯಾವುದೇ ಸರ್ಕಾರಿ ಅನುದಾನದಿಂದ ನಿರ್ಮಾಣವಾದ ತಡೆಗೋಡೆಯಲ್ಲ, ಖಾಸಗಿಯವರು ನಿರ್ಮಿಸಿರಬಹುದು. ನಮ್ಮ ವ್ಯಾಪ್ತಿಗೆ ಇದು ಬರುವುದಿಲ್ಲ ಎಂದಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top