ಕೊರಗಜ್ಜ ದೈವದ ನೇಮೋತ್ಸವದಲ್ಲಿ ಮಕ್ಕಳೊಂದಿಗೆ ನರ್ತನ ವೀಡಿಯೋ ವೈರಲ್ ವಿಚಾರ: ದೈವ ನರ್ತಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ಕೊರಗಜ್ಜ ದೈವದ ನೇಮೋತ್ಸವದಲ್ಲಿ ಮಕ್ಕಳೊಂದಿಗೆ ನರ್ತನ ವೀಡಿಯೋ ವೈರಲ್ ವಿಚಾರ: ದೈವ ನರ್ತಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

Kadaba Times News

ಕಡಬ ಟೈಮ್ಸ್ ,ಪ್ರಮುಖ ಸುದ್ದಿ,: ಕಳೆದ ಕೆಲವು ತಿಂಗಳ ಹಿಂದೆ ಮಡಿಕೇರಿಯಲ್ಲಿ ನಡೆದ ಒಂದು ಕೊರಗಜ್ಜ ದೈವದ ನೇಮೋತ್ಸವದಲ್ಲಿ ಕೊನೆಯ ಕ್ಷಣದಲ್ಲಿ ನೇಮದಲ್ಲಿ ಭಾಗವಹಿಸಿದ ಮಕ್ಕಳೊಂದಿಗೆ ನಾನು ನರ್ತನ ಮಾಡಿದ್ದು ಆ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿ ನನ್ನ ಬಗ್ಗೆ ಬೇರೆ ಬೇರೆ ರೀತಿಯ ಚರ್ಚೆಗಳಿಗೆ ಕಾರಣವಾದ ವಿಷಯಕ್ಕೆ ಸಂಬಂಧಿಸಿ ನಾನು ಸಮುದಾಯದ ಎಲ್ಲಾ ಹಿರಿಯ ಕಿರಿಯ ಭಾಂದವರಲ್ಲಿ ಮತ್ತು ಭಕ್ತ ರಲ್ಲಿ ನನ್ನಿಂದ ಆದ ತಪ್ಪಿಗೆ ಕ್ಷಮೆ ಯಾಚಿಸುವುದಾಗಿ ದೈವ ನರ್ತಕ ಜಯರಾಮ ಬೊಳಿಯಮಜಲು ರವರು ಜೂ. ೨೧ ರಂದು ಸುಳ್ಯ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.



ನಾನು ನಲಿಕೆ ಸಮುದಾಯದಿಂದ ಬಂದಿದ್ದು ನಾನು ತುಂಬಾ ವರ್ಷಗಳಿಂದ ಭೂತ ಕಟ್ಟುವ ಕಾಯಕ ಮಾಡುತ್ತಿದ್ದು ಇದು ಹಿಂದಿನ ಸಂಪ್ರದಾಯದಿಂದ ನಡೆದು ಬಂದುದಾಗಿದೆ. ತಿಂಗಳುಗಳ ಹಿಂದೆ ಮಡಿಕೇರಿಯಲ್ಲಿ ನಾನು ಒಂದು ಕೊರಗಜ್ಜ ಸಾನಿಧ್ಯದಲ್ಲಿ ಕೊರಗಜ್ಜ ನೇಮ ಕಟ್ಟಿದ್ದು ಎಲ್ಲಾ ಕ್ರಮ ಕಟ್ಟಳೆಗಳನ್ನು ಪಾಲಿಸಿಯೇ ನೇಮ ನಡೆದಿತ್ತು. ಆದರೆ ದೈವದ ವಿರಾಮದ ನಲಿಕೆಯಲ್ಲಿ ಅಲ್ಲಿನ ಕೆಲವು ದೈವ ಭಕ್ತ ಮಕ್ಕಳು ನನ್ನೊಂದಿಗೆ ಹೆಜ್ಜೆ ಹಾಕಿದ್ದರು. 


ಕಟ್ಟು ಕಟ್ಟಳೆ ಪ್ರಕಾರ ಈ ಬೆಳವಣಿಗೆ ತಪ್ಪಾಗಿದ್ದರೂ, ಅವರ ನಡೆ ನನಗೆ ಸರಿ ಬರದಿದ್ದರೂ, ಅಲ್ಲಿನ ಮುಖ್ಯಸ್ಥರು, ಮಧ್ಯಸ್ಥರು ಈ ಬಗ್ಗೆ ಯಾವುದೇ ತಡೆ ಮಾಡದ ಕಾರಣ ನಾನೂ ಮಕ್ಕಳ ಎಳೆ ಮನಸ್ಸಿಗೆ ನೋವು ಮಾಡುವುದು ಸರಿಯಲ್ಲ ಎಂದು ಅವರು ನನ್ನೊಂದಿಗೆ ಹೆಜ್ಜೆ ಹಾಕುವಾಗ ಸುಮ್ಮನಾಗಿದ್ದೆ. ಆ ದಿನದ ಪರಿಸ್ಥಿತಿಯಲ್ಲಿ ಕೊರಗಜ್ಜನನ್ನು ಆವಾಹನೆ ಮಾಡಿಕೊಂಡಿದ್ದ ನನಗೆ ಮೊಮ್ಮಕ್ಕಳ ಪ್ರಾಯದ ಮಕ್ಕಳು ನನ್ನೊಂದಿಗೆ ಹೆಜ್ಜೆ ಹಾಕುವಾಗ ಇದು ತಪ್ಪು ನಡೆ ಅನ್ನಲು ದೈವಿಚ್ಚೆಯೋ ಎಂಬಂತೆ ಹೇಳಲಾಗಲಿಲ್ಲ


ಆದರೆ ಈ ಒಂದು ಅಚಾತುರ್ಯ ನಡೆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ನನ್ನ ತೇಜೋವಧೆ ಮಾಡಲಾಗಿದೆ. ನನ್ನ ಖಾಸಗಿ ಬದುಕು, ವೃತ್ತಿ ಬದುಕನ್ನು ಟಾರ್ಗೆಟ್ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ನನ್ನ ಸಮುದಾಯದ ಜನರು, ದೈವಸೇವೆ ಮಾಡುವ ಇತರ ಸಮುದಾಯದ ಜನರು, ದೈವಭಕ್ತರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದರಿಂದ ನನಗೆ ವೃತ್ತಿ ಜೀವನವೇ ಬೇಡ ಎಂದೆನಿಸಿದೆ. 


ಒಂದು ಕಡೆ ಕಟ್ಟುಕಟ್ಟಳೆ, ಇನ್ನೊಂದು ಕಡೆ ದೈವ ಭಕ್ತ ಸಮಾಜ, ಮತ್ತೊಂದು ಕಡೆ ಮುಗ್ಧ ಮಕ್ಕಳು, ಯಾರನ್ನೂ ಸರಿದೂಗಿಸಲು ಆಗದೆ ಜರ್ಝರಿತನಾಗಿದ್ದೇನೆ. ಈ ಬಗ್ಗೆ ನನ್ನ ಆತ್ಮೀಯರಲ್ಲಿ, ಹಿತೈಷಿಗಳಲ್ಲಿ ನಾನು ಚರ್ಚಿಸಿದ್ದು, ಮಾಧ್ಯಮಗಳ ಮುಖಾಂತರ ಸಮಾಜದ, ಸಮುದಾಯದ ಕ್ಷಮೆ ಕೇಳಿ ಮನಸ್ಸಿನ ಭಾರ ತಗ್ಗಿಸಿಕೊಳ್ಳಲು ಸಲಹೆ ಬಂದ ಹಿನ್ನೆಲೆಯಲ್ಲಿ ನನ್ನ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದಿದ್ದು ಮೊನ್ನೆಯ ಘಟನೆಯಿಂದ ದೈವಗಳ ಕಟ್ಟುಕಟ್ಟಳೆಗೆ, ದೈವ ಸ್ಥಾನಗಳ ಗಾಂಭೀರ್ಯತೆಗೆ, ದೈವಾಭಿಮಾನಿಗಳ ಗೌರವಕ್ಕೆ ಧಕ್ಕೆ ಬಂದಿದ್ದರೆ ಅದಕ್ಕೆ ನಾನು ಬೇಷರತ್ತಾಗಿ ಸಮಾಜದ, ಸಮುದಾಯದ ಕ್ಷಮೆ ಕೇಳುತ್ತಿದ್ದೇನೆ ಎಂದರು.


ಇನ್ನು ಮುಂದೆ ಸಂಪ್ರದಾಯಗಳಿಗೆ ಧಕ್ಕೆ ಬರದಂತೆ, ದೈವಗಳ ಘನತೆ ಗೌರವಗಳನ್ನು ಊರ್ಜಿತದಲ್ಲಿಡಲು ಜೀವನ ಪೂರ್ತಿ ಶ್ರಮಿಸುತ್ತೇನೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಅನಿಲ್ ಕನಕಮಜಲು ಉಪಸ್ಥಿತರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top