ಮೇ 25 ರಂದು ಸುಬ್ರಹ್ಮಣ್ಯ ಸಹಿತ ದ.ಕ.ಜಿಲ್ಲೆಯ 9 ಗ್ರಾ.ಪಂ.ಗಳಿಗೆ ಉಪಚುನಾವಣೆ

Kadaba Times News

 ಕಡಬ ಟೈಮ್, ಕುಕ್ಕೆ ಸುಬ್ರಹ್ಮಣ್ಯ:  ಕಡಬ ತಾಲೂಕಿನ ಸುಬ್ರಹ್ಮಣ್ಯ, ಬಂಟ್ವಾಳದ ವಿಟ್ಲಮುಡ್ನೂರು,ಬಾಳ್ತಿಲ ಗ್ರಾಮ ಪಂಚಾಯತ್ ಸೇರಿದಂತೆ ..ಜಿಲ್ಲೆಯ 9 ಗ್ರಾಮ ಪಂಚಾಯತ್ಗಳ ತಲಾ ಒಂದು ಸ್ಥಾನಕ್ಕೆ ಮೇ 25ರಂದು ಉಪಚುನಾವಣೆ ನಿಗದಿಯಾಗಿದೆ.ರಾಜ್ಯದ ವಿವಿಧ ಜಿಲ್ಲೆಗಳ 222 ಗ್ರಾಮ ಪಂಚಾಯತ್ಗಳಲ್ಲಿ ತೆರವಾಗಿರುವ 260 ಸದಸ್ಯ ಸ್ಥಾನಗಳಿಗೆ ಅದೇ ದಿನ ಉಪಚುನಾವಣೆ ನಡೆಯಲಿದೆ.ಆರಂಭದಲ್ಲಿ ಮೇ 11ರಂದು ಉಪಚುನಾವಣೆ ನಿಗದಿಯಾಗಿತ್ತು.ಬಳಿಕ ಮುಂದೂಡಿಕೆಯಾಗಿ ಇದೀಗ ಮೇ 25ಕ್ಕೆ ನಿಗದಿಯಾಗಿದೆ.



ದ.ಕ.ಜಿಲ್ಲೆಯಲ್ಲಿ ಕಡಬ ತಾಲೂಕಿನ ಸುಬ್ರಹ್ಮಣ್ಯ, ಬಂಟ್ವಾಳ ತಾಲೂಕಿನ ಬಾಳ್ತಿಲ, ವಿಟ್ಲಮುಡ್ನೂರು, ಸುಳ್ಯ ತಾಲೂಕಿನ ಕನಕಮಜಲು,ಬೆಳ್ತಂಗಡಿ ತಾಲೂಕಿನ ಹೊಸಂಗಡಿ,ಪುದುವೆಟ್ಟು,ಮೂಡಬಿದಿರೆಯ ಪುತ್ತಿಗೆ, ಉಳ್ಳಾಲದ ಕಿನ್ಯಾ ಮತ್ತು ಮುನ್ನೂರು ಗ್ರಾಮ ಪಂಚಾಯತ್‌ಗಳಲ್ಲಿ ತೆರವಾಗಿರುವ ತಲಾ ಒಂದು ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.


ಈ ಕುರಿತು ಜಿಲ್ಲಾಧಿಕಾರಿಯವರು ಮೇ 8ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ನಾಮಪತ್ರಗಳನ್ನು ಸಲ್ಲಿಸಲು ಮೇ14 ಕೊನೆಯ ದಿನವಾಗಿದೆ.ನಾಮಪತ್ರಗಳ ಪರಿಶೀಲನೆ ಮೇ.15ರಂದು ನಡೆಯಲಿದೆ.ನಾಮಪತ್ರ ಹಿಂಪಡೆಯಲು ಮೇ 17 ಕಡೆ ದಿನವಾಗಿದೆ.ಮೇ 25ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ತನಕ ಮತದಾನ ನಡೆಯಲಿದೆ.ಮರು ಮತದಾನ ಅವಶ್ಯವಿದ್ದರೆ ಮೇ 27ರಂದು ನಡೆಯಲಿದೆ.ಮತಗಳ ಎಣಿಕೆ ಮೇ 28ರಂದು ಬೆಳಿಗ್ಗೆ 8 ಗಂಟೆಯಿಂದ ತಾಲೂಕು ಕೇಂದ್ರದಲ್ಲಿ ನಡೆಯಲಿದೆ.


 ಮೇ8ರಿಂದ ಮೇ 28ರವರೆಗೆ ನೀತಿ ಸಂಹಿತೆ ಜಾರಿ: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಽನಿಯಮ,1993ರ ಪ್ರಕರಣ 308ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೇ8ರಿಂದ ಮೇ 28ರವರೆಗೆ ಜಾರಿಯಲ್ಲಿರುತ್ತದೆ.ಗ್ರಾಮ ಪಂಚಾಯತ್‌ನ ಯಾವುದೇ ಕ್ಷೇತ್ರದಲ್ಲಿ ನಾಮಪತ್ರ ಸ್ವೀಕೃತವಾಗದೇ ಚುನಾವಣೆ ಪ್ರಕ್ರಿಯೆ ಮುಂದುವರಿಸಲಾಗದೆ ಇರುವ ಗ್ರಾಮ ಪಂಚಾಯತ್‌ಗಳಲ್ಲಿ ಹಾಗೂ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಯಾ ಹಿಂತೆಗೆತ ಇತ್ಯಾದಿ ಕಾರಣಗಳಿಂದ ಯಾವುದೇ ಅಭ್ಯರ್ಥಿ ಕಣದಲ್ಲಿರದೆ ಚುನಾವಣೆ ನಡೆಯದೇ ಇದ್ದಲ್ಲಿ ಅಥವಾ ಗ್ರಾಮ ಪಂಚಾಯತ್‌ನಲ್ಲಿನ ಚುನಾವಣೆ ಘೋಷಿಸಿರುವ ಎಲ್ಲಾ ಸ್ಥಾನಗಳಿಗೂ ಅವಿರೋಧ ಆಯ್ಕೆಯಾಗಿ ಫಲಿತಾಂಶ ಘೋಷಣೆಯಾಗಿದ್ದಲ್ಲಿ ಅಂತಹ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದು ತಕ್ಷಣದಿಂದ ನಿಂತು ಹೋಗುತ್ತದೆ.

ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.ಚುನಾವಣೆ ನಡೆಯುವ ‘ಅತಿಸೂಕ್ಷ್ಮ’ಮತಗಟ್ಟೆಯಲ್ಲಿ ಚುನಾವಣಾ ಪ್ರಕ್ರಿಯೆಗಳ ವೀಡಿಯೋಗ್ರಾಫಿಕ್ ಚಿತ್ರೀಕರಣ ಮಾಡಬೇಕು.ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮೊದಲು ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು.ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಯಾರಾದರೂ ಮದ್ಯವನ್ನು ಸ್ವಾದೀನ ಇಟ್ಟುಕೊಳ್ಳುವುದು ಅಥವಾ ಮದ್ಯವನ್ನು ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಮುನ್ನೆಚ್ಚರಿಕೆ   ಕ್ರಮವಾಗಿ ಅಂಥವರನ್ನು ಕಸ್ಟಡಿಯಲ್ಲಿಡಬೇಕು.ಚುನಾವಣೆ ಕಾಲದಲ್ಲಿ ಭ್ರಷ್ಟಾಚಾರ ತಡೆಗಟ್ಟುವ ಬಗ್ಗೆ ಸೂಕ್ತ ತಂಡ ರಚಿಸಿ ಕ್ರಮಕೈಗೊಳ್ಳಬೇಕು ಎಂದು ಆದೇಶದಲ್ಲಿ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಸುಬ್ರಹ್ಮಣ್ಯ:ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಶ್ರೀಮತಿ ಭಾರತಿಯವರಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.ಭಾರತಿಯವರು ಗ್ರಾಮ ಪಂಚಾಯತ್ ಸಭೆಗಳಿಗೆ ಹಾಜರಾಗದೇ ಇದ್ದುದರಿಂದ ಅವರ ಸದಸ್ಯತ್ವ ರದ್ದಾಗಿತ್ತು.  ಹಿಂದೆಯೊಮ್ಮೆ ಉಪಚುನಾವಣೆ ನಿಗದಿಯಾಗಿತ್ತಾದರೂ, ಕಸ್ತೂರಿರಂಗನ್ ವರದಿ ಜಾರಿ ವಿರುದ್ಧದ ಪ್ರತಿಭಟನಾರ್ಥಕವಾಗಿ ಇಲ್ಲಿ ಯಾರೂ ನಾಮಪತ್ರ ಸಲ್ಲಿಸದೇ ಇದ್ದುದರಿಂದ ಚುನಾವಣೆ ನಡೆದಿರಲಿಲ್ಲ.ಇದೀಗ ಮತ್ತೆ ಉಪಚುನಾವಣೆ ನಿಗದಿಯಾಗಿದೆ.

 ಕನಕಮಜಲು:ಸುಳ್ಯ ತಾಲೂಕಿನ ಕನಕಮಜಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿದ್ದ ರವಿಚಂದ್ರ ಕಾಪಿಲ ಅವರು ಅನಾರೋಗ್ಯದಿಂದಾಗಿ ನಿಧನರಾದ ಬಳಿಕ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

ಬಾಳ್ತಿಲ:ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸದಸ್ಯ ಡಿ.ಕೆ.ಅಣ್ಣಿ ಪೂಜಾರಿ ಅವರು ನಿಧನರಾಗಿದ್ದರಿಂದ ಸದಸ್ಯ ಸ್ಥಾನ ತೆರವಾಗಿ, ಇದೀಗ ಉಪಚುನಾವಣೆ ನಡೆಯಲಿದೆ.

ವಿಟ್ಲಮುಡ್ನೂರು:ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾ.ಪಂ.ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಉಮೇಶ್ ಗೌಡ ಅರ್ಕಲ್‌ತೋಟ ಅವರ ನಿಧನದಿಂದ ತೆರವಾದ ಸದಸ್ಯ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top