




ಕಡಬ ಟೈಮ್ಸ್ (KADABA TIMES):ಸುಳ್ಯ ವಿಧಾನ ಸಭಾ ಕ್ಷೇತ್ರದ ಗುತ್ತಿಗಾರು ಗ್ರಾಮದ ಕಮಿಲ-ಮೊಗ್ರ ಪ್ರದೇಶದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಗುತ್ತಿಗಾರು ಗ್ರಾ.ಪಂ ಮುಂದೆ ನಾಗರಿಕ ಕ್ರಿಯಾ ಸಮಿತಿ ವತಿಯಿಂದ ಅ. 28 ರಂದು ಸಾಂಕೇತಿಕ ಧರಣಿ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಅ.21 ರಂದು ಮೊಗ್ರ ಶ್ರೀ ಕನ್ನಡದೇವತೆ ಯಾನೆ ಪುರುಷ ದೈವಸ್ಥಾನದ ವಠಾರದಲ್ಲಿ ನಡೆದ ಸಭೆಯಲ್ಲಿ ನಡೆದಿದೆ. ಗುತ್ತಿಗಾರು-ಕಮಿಲ-ಬಳ್ಪ ರಸ್ತೆಯ ಸಮಗ್ರ ದುರಸ್ತಿ ಹಾಗೂ ಊರಿನ ಮತದಾನ ಕೇಂದ್ರ ಹಾಗೂ ಊರಿನ ಪ್ರಮುಖ ಕೇಂದ್ರವಾದ ಮೊಗ್ರ ಸಂಪರ್ಕಕ್ಕೆ ಸೇತುವೆ ನಿರ್ಮಾಣ ಪ್ರಮುಖವಾದ ಬೇಡಿಕೆಯಾಗಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ.
ಮೊಗ್ರದಲ್ಲಿ ಮತದಾನ ಆರಂಭವಾದಾಗಿನಿಂದಲೂ ಮತದಾನ ಕೇಂದ್ರ ಸಂಪರ್ಕಿಸಲು, ದೈನಂದಿನ ಕಾರ್ಯಚಟುವಟಿಕೆಗಳಗಳಿಗೆ ಜನರು ಮೊಗ್ರ ಹೊಳೆ ದಾಟಿಯೇ ಸಾಗುತ್ತಿದ್ದರು. ಊರಿನ ಶಾಲೆಗೆ ವಿದ್ಯಾರ್ಥಿಗಳು ಮರದ ಪಾಲ ದಾಟುತ್ತಿದ್ದರು. ಆದರೆ ಇದುವರೆಗೂ ಸೇತುವೆ ನಿರ್ಮಾಣ ಸಾಧ್ಯವಾಗಲಿಲ್ಲ. ಈ ಬಗ್ಗೆ ಹಲವು ಬಾರಿ ಸಂಬಂಧಿತ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು, ವಿವಿಧ ಮಾಧ್ಯಮಗಳು ಶಾಲೆಯ ಮಕ್ಕಳು ಅಪಾಯದಲ್ಲಿ ಈ ಹೊಳೆ ದಾಟುವ ಬಗ್ಗೆಯೂ ವರದಿ ಮಾಡಿದ್ದವು.

ಪ್ರತೀ ಬಾರಿಯ ಚುನಾವಣೆಯ ಸಂದರ್ಭ ಪ್ರಸ್ತಾವನೆಯ ನೆಪ ಇರಿಸಿ ಸೇತುವೆ ಆಗುತ್ತದೆ ಎಂದು ಹೇಳಲಾಗುತ್ತದೆ, ಆದರೆ ಇದುವರೆಗೂ ಸೇತುವೆ ನಿರ್ಮಾಣವಾಗಿಲ್ಲ, ಈ ಭಾಗದ ರಸ್ತೆಯೂ ಡಾಮರೀಕರಣವಾಗಿಲ್ಲ ಇನ್ನು ಸೇತುವೆಯ, ಡಾಮರೀಕರಣದ ಭರವಸೆ ಬೇಡ, ಅನುದಾನ ಮಂಜೂರಾದ ದಾಖಲೆ ಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿಬಂದಿದೆ. ಇದುವರೆಗಿನ ಆಶ್ವಾಸನೆಗಳು ಕೇಳಲಾಗಿದೆ. ಆದರೆ ಈ ಬಾರಿ ಯಾವುದೇ ಆಶ್ವಾಸನೆಗಳ ಬದಲಾಗಿ ಸೂಕ್ತ ದಾಖಲೆಗಳು ಅಗತ್ಯವಾಗಿದೆ ಎಂದು ಸಭೆಯಲ್ಲಿ ಬೇಡಿಕೆ ವ್ಯಕ್ತವಾಯಿತು.
ಸಭೆಯಲ್ಲಿ ನಾಗರಿಕ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಕಾರ್ಯಪ್ಪ ಗೌಡ ಚಿಕ್ಮುಳಿ,ಗಂಗಾಧರ ಭಟ್ ಪುಚ್ಚಪ್ಪಾಡಿ ,ಸುಧಾಕರ ಮಲ್ಕಜೆ, ಜೀವನ್ ಮಲ್ಕಜೆ, ಧನಂಜಯ ಮಲ್ಕಜೆ, ಬಿಟ್ಟಿ ಬಿ ನೆಡುನೀಲಂ, ಮಹೇಶ್ ಪುಚ್ಚಪ್ಪಾಡಿ, ಅಚ್ಚುತ ಮಲ್ಕಜೆ, ವಸಂತ ಮೊಗ್ರ, ವಿಶ್ವನಾಥ ಕೇಂಬ್ರೋಳಿ ಮೊದಲಾದವರಿದ್ದರು.